ಮಡಿಕೇರಿ, ಆ. 19: ಜಗಜ್ಯೋತಿ ಬಸವಣ್ಣ ಪ್ರಚಾರ ಪಡಿಸಿದ ವಿಚಾರ ಅದೊಂದು ಪ್ರತ್ಯೇಕ ಧರ್ಮವೆ ಆಗಿದೆ. ಅದನ್ನು ಬಸವ ಧರ್ಮ ಅಥವಾ ಲಿಂಗಾಯಿತ ಧರ್ಮ ಎಂದು ಮಾನ್ಯತೆ ನೀಡಬೇಕೆಂದು ಬಸವಪಂಥದ ಲಿಂಗಾಯಿತರು ಮುಂದಿಟ್ಟಿರುವ ಬೇಡಿಕೆ ಸಮಂಜಸವಾಗಿದೆ. ಇದನ್ನು ತಾವು ಬೆಂಬಲಿಸುವದಾಗಿ ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ಹೇಳಿದ್ದಾರೆ. ಮುಖ್ಯಮಂತ್ರಿಗಳು ಶೀಘ್ರವೇ ಬಸವ ಧರ್ಮಕ್ಕೆ ಮಾನ್ಯತೆ ನೀಡುವಂತೆ ಶಿಪಾರಸ್ಸು ಮಾಡಬೇಕೆಂದು ಆಗ್ರಹಿಸುವದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೀರಶೈವರು ಮತ್ತು ಲಿಂಗಾಯಿತರು ಇಬ್ಬರೂ ಒಂದೇ ಆಗಿದ್ದಾರ?. ಅಥವಾ ಬೇರೆಯ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುವದೇ ಇಲ್ಲ. ಬಸವಣ್ಣನವರು ಸ್ಥಾಪಿಸಿದ್ದು ಒಂದು ಪ್ರತ್ಯೇಕ ಧರ್ಮ ಎನ್ನುವದಾದರೆ ಅದು ಬಸವ ಧರ್ಮ ಅಥವಾ ಲಿಂಗಾಯಿತ ಧರ್ಮವಾಗುತ್ತದೆ. ಭಗವಾನ್ ಬುದ್ದ ಸ್ಥಾಪಿಸಿದ್ದು ಹೇಗೆ ಬೌದ್ದ ಧರ್ಮವಾಯಿತೋ, ಜೈನ ತೀರ್ಥಂಕರರು ಸ್ಥಾಪಿಸಿದ್ದು ಹೇಗೆ ಜೈನ ಧರ್ಮವಾಯಿತೋ, ಗುರುನಾನಕ್ ಅವರು ಸ್ಥಾಪಿಸಿದ್ದು, ಹೇಗೆ ಸಿಕ್ಕ್ ಧರ್ಮವಾಯಿತೋ ಹಾಗೆಯೇ ಬಸವಣ್ಣ ಸ್ಥಾಪಿಸಿದ್ದು ಬಸವ ಧರ್ಮ ಅಥವಾ ಲಿಂಗಾಯಿತ ಧರ್ಮ ಎಂದಾಗಬೇಕಾಗಿರುವದು ನ್ಯಾಯಸಮ್ಮತವಾಗಿದೆ. ಇದಕ್ಕೆ ಸರಕಾರ ಮಾನ್ಯತೆ ನೀಡಿ ‘ಪ್ರತ್ಯೇಕ ಧರ್ಮ’ ಎಂಬ ಘೋಷಣೆ ಮಾಡಿದಾಗ ಅದನ್ನು ಒಪ್ಪಿಕೊಳ್ಳುವ ಎಲ್ಲರೂ ಲಿಂಗಾಯಿತ ಧರ್ಮಾನುಯಾಯಿಗಳಾಗುತ್ತಾರೆ. ವೀರಶೈವರು ಜಗಜ್ಯೋತಿ ಬಸವಣ್ಣ ಸ್ಥಾಪಿಸಿದ ಧರ್ಮವನ್ನೇ ಒಪ್ಪಿಕೊಂಡರೆ ಅವರೂ ಲಿಂಗಾಯಿತರೆ ಆಗುತ್ತಾರೆ. ಇಲ್ಲವಾದಲ್ಲಿ ಇಲ್ಲ. ಇದರಲ್ಲಿ ವಿವಾದಕ್ಕೆ ಆಸ್ಪದವೆ ಇಲ್ಲ. ಆದ್ದರಿಂದ ಬಸವಣ್ಣ ಸ್ಥಾಪಿಸಿದ ಬಸವ ಧರ್ಮವೆಂದು ಮಾನ್ಯತೆ ನೀಡಿ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.