ಮಡಿಕೇರಿ, ಆ. 19: ಸ್ವತಂತ್ರ್ಯೋತ್ಸವ ಸಾರ್ವಜನಿಕ ಸಭೆಯಲ್ಲಿ ಸರಕಾರಿ ಕಾರ್ಯಕ್ರಮದಲ್ಲಿ ಕಂಡುಬಂದ ಅಸಹನೀಯ ಘಟನೆ ಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ.ಅಲ್ಲದೆ ವಿವಿಧ ಕೊಡವ ಸಮಾಜಗಳು ಮತ್ತಿತರ ಸಂಘಟನೆಗಳು ಪ್ರತಿಭಟನೆ ಮೂಲಕ ಇಂದು ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿದವು.ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷರಾದ ಟಿ.ಪಿ. ರಮೇಶ್ ಅವರು ಕಾರ್ಯಕ್ರಮದಲ್ಲಿ ಸನಿಹದಲ್ಲಿ ಕುಳಿತಿದ್ದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಹಸ್ತವನ್ನು ಅಚಾನಕ್ ಆಗಿ ಸ್ಪರ್ಶಿಸಿದ ದೃಶ್ಯ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಬಿತ್ತರಗೊಂಡಾಗ ಅದು ಸಮಾಜದಲ್ಲಿ ಅಸಹನೀಯವಾಗಿ ಪರಿಣಮಿಸಿದೆ. ಈ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ನೂತನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಖಂಡಿಸಲಾಯಿತು.

ನಗರದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರ ಕೈ ಸವರಿದ ವರ್ತನೆಗೆ ಸಂಬಂಧಿಸಿದಂತೆ ಕರ್ನಾಟಕ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ರಾಜೀನಾಮೆ ನೀಡುವದರೊಂದಿಗೆ ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ವಿವಿಧ ಕೊಡವ ಸಮಾಜಗಳಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಯಿತು.

ಹಗಲು ನಗರದ ತಿಮ್ಮಯ್ಯ ವೃತ್ರದಲ್ಲಿ ಜಮಾಯಿಸಿದ ಪ್ರಮುಖರು ಟಿ.ಪಿ. ರಮೇಶ್ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯೊಂದಿಗೆ ಜಿಲ್ಲಾಡಳಿತಕ್ಕೆ ಈ ಕುರಿತ ಮನವಿ ಸಲ್ಲಿಸಿದರು.

ಈ ವೇಳೆ ಕಾಂಗ್ರೆಸ್ಸಿನ ರಾಜೀವ್‍ಗಾಂಧಿ ಗ್ರಾಮೀಣ ಅಭಿವೃದ್ಧಿ ಯೋಜನಾ ಸಂಚಾಲಕ ತೆನ್ನಿರ ಮೈನಾ, ಮಕ್ಕಂದೂರು ಕೊಡವ ಸಮಾಜ

(ಮೊದಲ ಪುಟದಿಂದ) ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹಾಗೂ ಅಲ್ಲಿನ ಪ್ರಮುಖ ಶಾಂತೆಯಂಡ ರವಿ ಕುಶಾಲಪ್ಪ, ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟೀರ ಚಿಣ್ಣಪ್ಪ, ಕೊಡವ ಪೊಮ್ಮಕ್ಕಡ ಒಕ್ಕೂಟದ ಕವಿತಾ ಬೊಳ್ಯಪ್ಪ ಹಾಗೂ ಪೊನ್ನಂಪೇಟೆ ಸಮಾಜದ ಪ್ರತಿನಿಧಿ ಎಂ.ಎಂ. ರವೀಂದ್ರ ಅವರುಗಳು ರಮೇಶ್ ವರ್ತನೆ ಖಂಡಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಮಕ್ಕಂದೂರು ಹಾಗೂ ಮಡಿಕೇರಿ ಕೊಡವ ಸಮಾಜದ ಮನು ಉತ್ತಪ್ಪ, ಪವನ್ ತಿಮ್ಮಯ್ಯ, ಮಾದೇಟಿರ ಬೆಳ್ಯಪ್ಪ, ಅರೆಯಡ ರಮೇಶ್ ಸೇರಿದಂತೆ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಪ್ರಮುಖರುಗಳಾದ ಕಾಂತಿ ಸತೀಶ್, ವಿ.ಕೆ. ಲೋಕೇಶ್, ಮೋಂತಿ ಗಣೇಶ್, ಅನಿತಾ ಪೂವಯ್ಯ, ಯಮುನಾ ಚಂಗಪ್ಪ, ರಾಬಿನ್ ದೇವಯ್ಯ, ಸಜಿಲ್ ಕೃಷ್ಣನ್, ಡೀನ್ ಬೋಪಣ್ಣ ಸೇರಿದಂತೆ ಕೊಡವ ಸಮಾಜ ಪ್ರಮುಖರುಗಳು ಹಾಗೂ ಕಾಂಗ್ರೆಸ್ ಹಾಗೂ ಬಿಜೆಪಿ ಕೆಲವರು ಹಾಜರಿದ್ದರು. ಬಿಜೆಪಿ ಮಹಿಳಾ ಮೋರ್ಚಾದಿಂದ ಘಟನೆಯನ್ನು ಖಂಡಿಸಿ ಪ್ರತಿಭಟಿಸಲಾಯಿತು.

ಖಂಡನೆ

* ರಮೇಶ್ ವರ್ತನೆ ಮಹಿಳಾ ಸಮುದಾಯಕ್ಕೆ ಆಗಿರುವ ಅವಮಾನ - ಜಿಲ್ಲಾ ಪಂಚಾಯತ್‍ವ ಕಾಂಗ್ರೆಸ್ ಸದಸ್ಯೆ ಸರಿತಾ ಪೂಣಚ್ಚ.

* ರಮೇಶ್ ಸ್ಥಾನಗಳಿಗೆ ರಾಜೀನಾಮೆ ನೀಡಿದಿದ್ದರೆ ಪ್ರತಿಭಟನೆ - ಬಿಜೆಪಿ ಮಾಜೀ ಜಿಲ್ಲಾಧ್ಯಕ್ಷ ಎಂ.ಎಂ. ರವೀಂದ್ರ.

* ರಮೇಶ್ ಅವರು ಹೊಂದಿರುವ ಎಲ್ಲ ಹುದ್ದೆಗಳಿಂದ ವಜಾಗೊಳಿಸಿ - ಯುಕೊ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ.

* ರಮೇಶ್ ಅವರ ಅಸಭ್ಯ ವರ್ತನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು - ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಶ್ವ ಕಾರ್ಯಪ್ಪ.

* ರಮೇಶ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿ - ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಡೇಮಾಡ ಕುಸುಮಾ ಜೋಯಪ್ಪ.

* ರಮೇಶ್ ವರ್ತನೆ ನಾಗರಿಕ ಸಮಾಜ ತಲೆತಗ್ಗಿಸುವಂತಹುದು - ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಹಾಗೂ ನಿರ್ದೇಶಕರು.

ರಮೇಶ್ ಕೂಡಲೇ ರಾಜೀನಾಮೆ ನೀಡಲಿ - ಬಿಜೆಪಿ ಮಹಿಳಾ ಮೋರ್ಚಾ.

* ರಮೇಶ್ ಜವಾಬ್ದಾರಿ ಮರೆತು ಅಪಚಾರ ಎಸಗಿದ್ದಾರೆ - ಅರವತ್ತೊಕ್ಲು ಗ್ರಾ.ಪಂ. ಮಾಜೀ ಅಧ್ಯಕ್ಷ ಮಲ್ಲಂಡ ಪ್ರಕಾಶ್.

* ರಮೇಶ್ ಅವರದು ಅಸಭ್ಯ ವರ್ತನೆ - ಕ್ರಮಕ್ಕಾಗಿ ಪ್ರತಿಭಟನೆ ಅನಿವಾರ್ಯ - ಕೊಡಗು ಜಿಲ್ಲಾ ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಹಾಗೂ ಪದಾಧಿಕಾರಿಗಳು.

* ರಮೇಶ್ ವಿರುದ್ಧ ದೂರು ದಾಖಲಿಸಿ ಕ್ರಮಕೈಗೊಂಡು ಬಂಧಿಸಬೇಕು - ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಗೂ ಪದಾಧಿಕಾರಿಗಳು.