ಸುಂಟಿಕೊಪ್ಪ, ಆ. 19: ತೀರಾ ಹದಗೆಟ್ಟು ಹೋಗಿದ್ದ ಹಟ್ಟಿಹೊಳೆ-ಮಕ್ಕೋಡ್ಲು ಗ್ರಾಮಕ್ಕೆ ತೆರಳುವ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಚಾಲನೆ ನೀಡಿದರು.

‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಹಟ್ಟಿಹೊಳೆಯ 10.10 ಕಿಮೀ ರಸ್ತೆ ಕಾಮಗಾರಿಯನ್ನು 10,20,60,000 ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಗದ್ದೆ ಇರುವ ಜಾಗದಲ್ಲಿ ರಸ್ತೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುವದು. ಈ ರಸ್ತೆಯನ್ನು 5 ವರ್ಷಗಳ ಕಾಲ ಸಂಬಂಧಿಸಿದ ಇಂಜಿನಿಯರ್, ಗುತ್ತಿಗೆದಾರರು ನಿರ್ವಹಣೆ ಮಾಡಬೇಕು; 6ನೇ ವರ್ಷವೂ ಡಾಮರ್ ಹಾಕಿ ರಸ್ತೆ ಸರಿಪಡಿಸಿಕೊಳ್ಳಬೇಕು. 13 ವರ್ಷಗಳ ಕಾಲ ರಸ್ತೆ ಬಾಳಿಕೆ ಬರಲಿದೆ. ರಸ್ತೆಯ ಅಕ್ಕ ಪಕ್ಕದ ತೋಟದ ಮನೆಯ ಮಾಲೀಕರು ಜಾಗ ಬಿಟ್ಟು ಕೊಡುವ ಮೂಲಕ ಸಹಕಾರ ನೀಡಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಮುಕ್ಕೋಡ್ಲು ನಿವಾಸಿ ಎಂ.ಎಲ್.ಸಿ. ವೀಣಾಅಚ್ಚಯ್ಯ ಮಾತನಾಡಿ, ಗ್ರಾಮದ ಬಹುದಿನದ ಬೇಡಿಕೆ ಈ ರಸ್ತೆ ನಿರ್ಮಾಣದಿಂದ ಈಡೇರಿದಂತಾಗುತ್ತಿದೆ. ಸ್ಥಳೀಯರು ರಸ್ತೆ ಆಗಲೀಕರಣಕ್ಕೆ ಜಾಗ ಬಿಟ್ಟುಕೊಡಬೇಕೆಂದರು.

ಈ ಸಂದರ್ಭ ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ, ಗ್ರಾ.ಪಂ. ಅಧ್ಯಕ್ಷೆ ಲಕ್ಕಪ್ಪನ ಕಾವೇರಮ್ಮ, ಉಪಾಧ್ಯಕ್ಷ ಕನ್ನಿಕಂಡ ಶ್ಯಾಮ್, ಸುಬ್ಬಯ್ಯ, ಗ್ರಾ.ಪಂ. ಸದಸ್ಯ ರಮೇಶ, ಅಣ್ಣೆಚ್ಚಿರ ಸತೀಶ್, ಗ್ರಾಮದ ಅಧ್ಯಕ್ಷ ನಾಣಿಯಪ್ಪ, ಗ್ರಾ.ಪಂ. ಮಾಜಿ ಸದಸ್ಯ ಗಣೇಶ, ಗುತ್ತಿಗೆದಾರರಾದ ಪುರುಷೋತ್ತಮ್, ಸುರೇಶ್ ಹಾಗೂ ಗ್ರಾಮಸ್ಥರು ಇದ್ದರು.