*ಗೋಣಿಕೊಪ್ಪಲು, ಆ. 19: ವೀರಾಜಪೇಟೆ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ಹೆಲ್ಮೆಟ್ ಜಾಗೃತಿ ಜಾಥಾ ನಡೆಸಲಾಯಿತು.

ವಿಶ್ವಛಾಯಾಚಿತ್ರ ಗ್ರಾಹಕರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹೆಲ್ಮೆಟ್ ಧರಿಸಿದ 32 ಮಂದಿ ಗೋಣಿಕೊಪ್ಪಲಿನ ಆರ್‍ಎಂಸಿ ಆವರಣದಿಂದ ಬೈಕ್‍ನಲ್ಲಿ ವೀರಾಜಪೇಟೆ, ಅಮ್ಮತ್ತಿ, ಪಾಲಿಬೆಟ್ಟ ಮಾರ್ಗವಾಗಿ ಸಿದ್ದಾಪುರ ತಲಪಿದರು.

ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಬಿ.ಸುನಿಲ್ ಜೀವರಕ್ಷಣೆ ದೃಷ್ಟಿಯಿಂದ ಹೆಲ್ಮೆಟ್ ಧರಿಸುವದು ಒಳ್ಳೆಯದು. ಸುಪ್ರೀಂ ಕೋರ್ಟ್ ಕೂಡ ಇದನ್ನು ಕಡ್ಡಾಯ ಮಾಡಿದೆ. ಆದರೂ ಕೆಲವು ಯುವಕರು ಇದನ್ನು ನಿರ್ಲಕ್ಷ್ಯಮಾಡಿ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

‘ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ’ ಎಂಬ ಘೋಷಣೆ ಜಾಥಾದುದ್ದಕ್ಕೂ ಕೇಳಿ ಬಂತು. ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ ಜಾಥಾ ಉದ್ಘಾಟಿಸಿದರು.ಗ್ರಾಮ ಪಂಚಾಯಿತಿ ಸದಸ್ಯ ಚಿಣ್ಣಪ್ಪ, ಛಾಯಾಚಿತ್ರ ಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಮೂಕಳೇರ ಲಕ್ಷ್ಮಣ, ವಲಯ ನಿರ್ದೇಶಕ ಟಿ.ರಾಮದಾಸ್ ಹಾಜರಿದ್ದರು.

ಸಂಘದ ಸದಸ್ಯರು ಗುಹ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಕಸಕಡ್ಡಿಗಳನ್ನು ಕಡಿದು ಸ್ವಚ್ಚಗೊಳಿಸಿದರು.

ಸೋಮವಾರಪೇಟೆ

ಇಲ್ಲಿನ ಪುಷ್ಪಗಿರಿ ಛಾಯಾಚಿತ್ರಗ್ರಾಹಕರ ಸಂಘದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಯುವ ಸಮೂಹ ಸ್ವಯಂಪ್ರೇರಣೆಯಿಂದ ಭಾಗವಹಿಸಿತ್ತು.

ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಸಂಘದ ಜಿಲ್ಲಾಧ್ಯಕ್ಷ ವಿಶ್ವಕುಮಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಡಿಕೇರಿಯ ವೈದ್ಯೆ ಪ್ರಿಯದರ್ಶಿನಿ ಮಾತನಾಡಿ, ನಿಯಮಿತ ರಕ್ತದಾನದಿಂದ ಮಾನವನ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದರು.

18 ರಿಂದ 60 ವರ್ಷ ವಯೋಮಾನದ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಒಮ್ಮೆ ರಕ್ತದಾನ ಮಾಡಿದ ನಂತರ ಮೂರು ತಿಂಗಳು ರಕ್ತದಾನದಿಂದ ದೂರವಿರಬೇಕು. ಇಂತಹ ಶಿಬಿರಗಳ ಮೂಲಕ ದಾನಿಗಳು ಮುಂದೆ ಬಂದರೆ ಮತ್ತೊಬ್ಬರ ಜೀವವನ್ನು ಉಳಿಸಬಹುದು ಎಂದರು.

ಸಂಘದ ಅಧ್ಯಕ್ಷ ಆದರ್ಶ್ ಮಾತನಾಡಿ, ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ತುರ್ತು ಸಂದರ್ಭ ರಕ್ತಕ್ಕಾಗಿ ಕರೆಮಾಡಿದರೆ ಯಾವದೇ ಬದಲಿ ರಕ್ತಕ್ಕೆ ಬೇಡಿಕೆಯಿಡದೆ ಅವಶ್ಯಕವಿರುವ ರಕ್ತವನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ಛಾಯಾ ಚಿತ್ರಗ್ರಾಹಕರ ಸಂಘದ ರಾಜ್ಯ ನಿರ್ದೇಶಕ ಸಲೀಂ, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್, ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಡೇವಿಡ್, ಖಜಾಂಚಿ ಹರೀಶ್, ಸಲಹೆಗಾರ ಸುಬ್ರಮಣಿ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು. ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.

ಶಿಬಿರದಲ್ಲಿ ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದರೊಂದಿಗೆ ಯುವ ಸಮೂಹ, ಸಾರ್ವಜನಿಕರು, ನಿಯಮಿತವಾಗಿ ರಕ್ತ ನೀಡುತ್ತಿರುವ ರಕ್ತದಾನಿಗಳು ಶಿಬಿರದಲ್ಲಿ ಪಾಲ್ಗೊಂಡರು. ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ನಡೆದ ಶಿಬಿರದಲ್ಲಿ 140 ಮಂದಿ ತಮ್ಮ ರಕ್ತವನ್ನು ದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು. ಮಡಿಕೇರಿ ಮತ್ತು ಮೈಸೂರಿನ ರಕ್ತನಿಧಿ ಘಟಕದ ವೈದ್ಯರು ಹಾಗೂ ಸಿಬ್ಬಂದಿಗಳು ಆಗಮಿಸಿ ರಕ್ತ ಶೇಖರಿಸಿದರು.