ಮಡಿಕೇರಿ, ಆ. 20: ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉಳುವವನೇ ಭೂಮಿಯ ಒಡೆಯ ಸೇರಿದಂತೆ ವಿನೂತನ ಕಾರ್ಯಕ್ರಮ ಗಳನ್ನು ಜಾರಿಗೊಳಿಸುವ ಮೂಲಕ ಬಡವರು, ಹಿಂದುಳಿದ ವರ್ಗದ ವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಭಾನುವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಅರಸು ಅವರ 102ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜೀತ ಪದ್ಧತಿ ನಿರ್ಮೂಲನೆ, ವಿದ್ಯಾರ್ಥಿ ನಿಲಯಗಳ ಆರಂಭ, ಶಿಷ್ಯವೇತನ ಹೀಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬದಲಾವಣೆ ಜೊತೆಗೆ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಕ್ರಾಂತಿಕಾರಕ ಸುಧಾರಣೆಗಳನ್ನು ಜಾರಿಗೊಳಿಸಿದರು ಎಂದು ಶಾಸಕರು ಸ್ಮರಿಸಿದರು.
ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ
(ಮೊದಲ ಪುಟದಿಂದ) ಡಿ. ದೇವರಾಜ ಅರಸು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದರೂ ಸಹ ಅವರನ್ನೇ ಮುಖ್ಯಮಂತ್ರಿ ಎಚಿದು ರಾಜ್ಯದ ಜನ ಭಾವಿಸಿದ್ದರು. ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದ ಜನತೆಗೆ ಡಿ.ದೇವರಾಜ ಅರಸು ಅವರು ಜನ ಮೆಚ್ಚುವ ಕಾರ್ಯಕ್ರಮ ನೀಡಿದ್ದೇ ಇದಕ್ಕೆ ಸಾಕ್ಷಿ ಎಂದು ಸ್ಮರಿಸಿದರು.
ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಅಭಿವೃದ್ಧಿಗಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಮ್ಮದೇ ಆದ ಸಾಮಾಜಿಕ ನಿಲುವನ್ನು ಜಾರಿಗೆ ತರಲು ಪ್ರಯತ್ನಿಸಿದರು. ನಿರಂತರ ಅಧ್ಯಯನ ಶೀಲತೆ ಜೊತೆಗೆ ಚಲನಶೀಲತೆಯನ್ನು ಅರಸು ಮೈಗೂಡಿಸಿಕೊಂಡಿದ್ದರು ಎಂದು ತಿಳಿಸಿದರು.
ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ವಿಜು ಸುಬ್ರಮಣಿ ಮಾತನಾಡಿ, ಡಿ.ದೇವರಾಜ ಅರಸು ಅವರು ಜನಸಾಮಾನ್ಯರ ಅಭಿವೃದ್ಧಿಗೆ ಶ್ರಮಿಸಿದರು, ಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿದರು, ಜನಪರ ಆಡಳಿತದಿಂದಾಗಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ನುಡಿದರು.
ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯೆ ಸರೋಜಮ್ಮ ಮಾತನಾಡಿ, ಡಿ. ದೇವರಾಜ ಅರಸು ಅವರ ಆಡಳಿತಾವಧಿಯ 80ರ ದಶಕವನ್ನು ಸಾಮಾಜಿಕ ಕಳಕಳಿಯ ದಶಕ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಡಿ.ದೇವರಾಜ ಅರಸು ಅವರು ಬಡವರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಜನ ಸಾಮಾನ್ಯರಲ್ಲಿ ಬದುಕುವ ವಿಶ್ವಾಸ ಮೂಡಿಸಿದರು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ, 20ನೇ ಶತಮಾನದಲ್ಲಿ ಡಾ ಬಿ.ಆರ್. ಅಂಬೇಡ್ಕರ್ ಹಾಗೆಯೇ ಡಿ. ದೇವರಾಜ ಅರಸು ಸಾಮಾಜಿಕ ಮತ್ತು ಪ್ರಗತಿಪರ ಸುಧಾರಣೆಗಳನ್ನು ಜಾರಿಗೊಳಿಸಿದರು ಎಂದು ವಿವರಿಸಿದರು.
ಕರ್ನಾಟಕದಲ್ಲಿ ಮಾತ್ರ ಭೂ ಸುಧಾರಣೆ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳ್ಳಲು ಕಾರಣವಾಯಿತು. ಇದಕ್ಕೆ ಡಿ.ದೇವರಾಜ ಅರಸು ಅವರ ಆಡಳಿತವೇ ಕಾರಣ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕೆ.ಸಿ. ದಯಾನಂದ ಮಾತನಾಡಿ, ಡಿ. ದೇವರಾಜ ಅರಸು ಅವರು ಚಿಕಿತ್ಸಕ ರೂಪವಾಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಸಮಾಜದಲ್ಲಿ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸಿದರು ಎಂದರು.
ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ದೇವರಾಜ ಅರಸು ಅವರ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆ, ಭಾಷಣ ವಿಭಾಗದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಕುಶಾಲನಗರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ಪಲ್ಲವಿ ಮತ್ತು ಚೈತನ್ಯ ನಾಡಗೀತೆ ಹಾಡಿದರು, ಸುಪ್ರಭಾ ಅವರು ಪ್ರಾರ್ಥಿಸಿದರು, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.