ವೀರಾಜಪೇಟೆ, ಆ. 20: “ಮನುಷ್ಯ ಸಂಬಂಧಗಳ ನಾಶ ಸಮಾಜವನ್ನು ವಿನಾಶದತ್ತ ಕೊಂಡೊಯ್ಯುತ್ತದೆ.” ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಪಿ. ಸುನಿಲ್ ಸುಬ್ರಮಣಿ ಹೇಳಿದ್ದಾರೆ. ಅವರು ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಎಸ್.ಎಂ.ಎಸ್. ವಿದ್ಯಾಪೀಠದಲ್ಲಿ ಲಿಂಗೈಕ್ಯ ಶ್ರೀ ಶಾಂತಮಲ್ಲ ಸ್ವಾಮೀಜಿಯವರ 20ನೇ ಸಂಸ್ಮರಣಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡು ತ್ತಿದ್ದರು. “ವಿದ್ಯಾರ್ಥಿಗಳು ಪೋಷಕರ ಹಾಗೂ ಶಿಕ್ಷಕರ ಭರವಸೆಗೆ ಅನುಸಾರ ಬೆಳೆಯಬೇಕು. ಉತ್ತಮ ಕನಸುಗಳನ್ನು ಹೊಂದಿರುವವರು ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ವಿದ್ಯಾರ್ಥಿ ಸಮುದಾಯ ಇಡೀ ಸಮಾಜದ ಕನಸು ಹೊರುವಂತವರಾಗ ಬೇಕು.” ಎಂದರು. ಪೊನ್ನಂಪೇಟೆಯ ರಾಮಕೃಷ್ಣ ಶಾರಾದಾಶ್ರಮದ ಶ್ರೀ ಬೋಧ ಸ್ವರೂಪಾನಂದಜೀ ಮಹಾರಾಜ್ ದಿವ್ಯ ಸಾನಿಧ್ಯ ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಶಿಕ್ಷಣವೆಂಬುದು ನೈತಿಕತೆ ಮತ್ತು ವ್ಯಾವಹಾರಿಕತೆಯನ್ನು ಒಂದೇ ರೀತಿಯಲ್ಲಿ ಕೊಂಡೊಯ್ಯು ವಂತಾಗಬೇಕು. ಪೋಷಕರಿಗೆ ಮತ್ತು ಶಿಕ್ಷಕರಿಗೆ ಗೌರವ ನೀಡದಂತಹ ಸಮಾಜ ಅವನತಿಯೆಡೆಗೆ ಸಾಗುತ್ತದೆ. ಆದುದರಿಂದ ಕೆಳಹಂತದಲ್ಲಿಯೇ ನೈತಿಕ ಶಿಕ್ಷಣ ನೀಡುವಂತಾಗಬೇಕು ಎಂದರು.

ಕೇಂದ್ರ ಲೋಕಸೇವಾ ಆಯೋಗದ ಈ ವರ್ಷದ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 8ನೇ ರ್ಯಾಂಕ್ ಪಡೆದ ಮುಕ್ಕಾಟಿರ ಪುನೀತ್ ಕುಟ್ಟಯ್ಯ ಹಾಗೂ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಗಳಿಸಿದ ಡಾ||ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ|| ಬಸವರಾಜ್ ನಾವು ಹೊಂದಿರುವ ಮಾನವ ಸಂಪನ್ಮೂಲವನ್ನು ಉತ್ತಮ ರೀತಿಯಲ್ಲಿ ಬಳಸಿದಲ್ಲಿ ಭಾರತವು ಬಲಿಷ್ಠವಾದ ದೇಶವಾಗಲು ಸಾಧ್ಯ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಬಿ.ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಕಾಂತರಾಜು, ತಾಲೂಕು ಅಧ್ಯಕ್ಷ ಕೆ.ಎನ್.ಸಂದೀಪ್, ಮೈಸೂರಿನ ರಾಷ್ಟ್ರೀಯ ಇಂಜಿನಿಯರಿಂಗ್ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ||ಕೆ.ನಿತಿನ್ ಗಣಪತಿ ಈ ಸಂದರ್ಭ ಮಾತನಾಡಿದರು. ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಯವರು ಆಶೀರ್ವಚನ ನೀಡಿದರು. ಎಸ್.ಎಂ.ಎಸ್. ವಿದ್ಯಾಪೀಠದ ಆಶ್ರಯದಲ್ಲಿ ನೂತನವಾಗಿ ಪ್ರಾರಂಭಿಸಲಾದ ಪದವಿಪೂರ್ವ ಕಾಲೇಜನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಗೊಳಿಸಲಾಯಿತು. ಪ್ರಾಂಶುಪಾಲೆ ಕುಸುಂ ಸ್ವಾಗತಿಸಿದರು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಯವರು ವೇದಿಕೆಯಲ್ಲಿದ್ದರು.