ಭಾಗಮಂಡಲ, ಆ. 20: ಮುಂದೆ ವಾರ್ಷಿಕ ಪರೀಕ್ಷೆ ಎದುರಾಗಲಿದ್ದು ಪರೀಕ್ಷೆಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸತೀಶ್ ಭಟ್ ಹೇಳಿದರು. ಸಿಸ್ಕೋ ಕಂಪೆನಿಯ ಸಹಯೋಗದೊಂದಿಗೆ ಸಿಸ್ಕೋ ಸಂಭ್ರಮ ಕಾರ್ಯಕ್ರಮದಡಿ ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಅಧ್ಯಯನ ತಂತ್ರಗಳ ಕಾರ್ಯಾಗಾರದಲ್ಲಿ ಮಾತನಾಡಿದರು.

ಪಠ್ಯವನ್ನು ಕೇವಲ ಪರೀಕ್ಷೆಗಾಗಿ ಮಾತ್ರ ಓದದೆ ಜ್ಞಾನಾರ್ಜನೆಗಾಗಿ ಓದಿದಲ್ಲಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಾಧ್ಯವಿದೆ. ಕಲಿಕೆಯ ಉದ್ದೇಶವನ್ನು ಅರ್ಥೈಸಿಕೊಂಡು ನೆನಪಿನ ಶಕ್ತಿ ವೃದ್ದಿಸಿ ಏಕಾಗ್ರತೆಯನ್ನು ಬೆಳೆಸಿಕೊಂಡು ಸವಾಲುಗಳನ್ನು ಮೀರಿ ನಿಲ್ಲುವದು ಹೇಗೆ ಎಂಬದನ್ನು ಮನವರಿಕೆ ಮಾಡಿಕೊಟ್ಟರು.

ಕಾರ್ಯಾಗಾರವನ್ನು ಉದ್ಘಾಟಿಸಿದ ವಿದ್ಯಾಸಂಸ್ಥೆಯ ಅಧ್ಯಕ್ಷ ಹೊಸೂರು ಸತೀಶ್‍ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗೆ ಈಗಿನಿಂದಲೇ ಮಾನಸಿಕವಾಗಿ ಸಿದ್ದರಾಗಬೇಕು ಎಂದರು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪಾಂಡಿ ತಿಮ್ಮಯ್ಯ, ಹಿರಿಯ ನಿರ್ದೇಶಕ ನಾರಾಯಣಾಚಾರ್, ಮುಖ್ಯ ಶಿಕ್ಷಕಿ ಪೂರ್ಣಿಮಾ, ಶಿಕ್ಷಕರು ಉಪಸ್ಥಿತರಿದ್ದರು. ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜು, ಚೇರಂಬಾಣೆಯ ಅರುಣ ಪದವಿಪೂರ್ವ ಕಾಲೇಜು ಹಾಗೂ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.