ಕುಶಾಲನಗರ, ಆ. 20: ಕುಶಾಲನಗರ ಪಟ್ಟಣ ಪಂಚಾಯಿತಿ 18 ತಿಂಗಳ ಕಾಲ ಅಧ್ಯಕ್ಷರಾಗಿ ತನ್ನ ಅಧಿಕಾರಾವಧಿಯಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ತಿಳಿಸಿದ್ದಾರೆ.

ಪಕ್ಷದ ಒಳ ಒಪ್ಪಂದದ ಪ್ರಕಾರ ತಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವದಾಗಿ ಮಾಹಿತಿ ನೀಡಿದ ಚರಣ್, ಪಟ್ಟಣದ ವಿವಿಧ ಯೋಜನೆಗಳಿಗೆ ಅಂದಾಜು ರೂ 20 ಕೋಟಿ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಪಟ್ಟಣ ಪಂಚಾಯಿತಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ರೂ 8 ಕೋಟಿ, ಪಟ್ಟಣದ ರಸ್ತೆ, ಚರಂಡಿ, ಹೈಟೆಕ್ ಮಾರುಕಟ್ಟೆ ಸೇರಿದಂತೆ ರೂ 8 ಕೋಟಿ ವೆಚ್ಚದ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳ ವಿಶೇಷ ಕೊಡಗು ಪ್ಯಾಕೆಜ್ ಯೋಜನೆಯಡಿಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯರಸ್ತೆಯಲ್ಲಿ ಚರಂಡಿ, ಕಾಲುದಾರಿ ನಿರ್ಮಾಣ ಸೇರಿ ಒಟ್ಟು ರೂ. 5 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಈಗಾಗಲೆ ಚಾಲನೆ ನೀಡಲಾಗಿದೆ ಎಂದು ವಿವರ ಒದಗಿಸಿದರು.

ಪಟ್ಟಣದಲ್ಲಿ 3 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಗುಂಡುರಾವ್ ಬಡಾವಣೆಯ ನಿವೇಶನಗಳ ಹರಾಜು ಪ್ರಕ್ರಿಯೆಗೆ ತಮ್ಮ ಆಡಳಿತ ಮಂಡಳಿ ಮೂಲಕ ವಿಶೇಷ ಮುತುವರ್ಜಿ ವಹಿಸಿದ್ದು ಈ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತಗೊಂಡಿದೆ ಎಂದರು. ಅಧ್ಯಕ್ಷನಾಗಿ ತನಗೆ ಕೆಲಸ ಕಾರ್ಯಗಳ ಬಗ್ಗೆ ಸಂಪೂರ್ಣ ತೃಪ್ತಿ ಇರುವದಾಗಿ ‘ಶಕ್ತಿ’ಯೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸ್ವಚ್ಛ ಕುಶಾಲನಗರ ನಿರ್ಮಾಣದೊಂದಿಗೆ ಜೀವನದಿ ಕಾವೇರಿ ಸಂರಕ್ಷಣೆಗಾಗಿ ಪಂಚಾಯಿತಿಯ ಬಜೆಟ್‍ನಲ್ಲಿ ಆದ್ಯತೆ ನೀಡಿದ್ದು ತನ್ನ ಅಧಿಕಾರಾವಧಿಯಲ್ಲಿ ಎಲ್ಲಾ ಸದಸ್ಯರ ಸಹಕಾರ ದೊರೆತಿರುವದಾಗಿ ತಿಳಿಸಿದ ಚರಣ್, ವಿವಿಧ ಸಂಘಸಂಸ್ಥೆಗಳು ಪಟ್ಟಣದ ಅಭಿವೃದ್ಧಿಯಲ್ಲಿ ಕೈಜೋಡಿಸಿರುವ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸುವದಾಗಿ ಹೇಳಿದರು. ಮುಂದಿನ ಉಳಿದ ಅವಧಿಗೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ರೇಣುಕಾ ಅವರು ಆಯ್ಕೆಯಾಗುವದಾಗಿ ಅವರು ತಿಳಿಸಿದ್ದಾರೆ.