ಮಡಿಕೇರಿ, ಆ. 20: ಮೂಳೆ ತಜ್ಞರಾಗಿದ್ದ ದಿ. ಡಾ. ಸುರೇಶ್ ಅವರ ಜ್ಞಾಪಕಾರ್ಥ ಬೆಂಗಳೂರಿನ ಹೈಮಾಸ್ ಸೆಂಟರ್ ವತಿಯಿಂದ ನಗರದ ಸದಾಯುಷ್ ಕೇಂದ್ರದಲ್ಲಿ ಇಂದು ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು.ಶಿಬಿರಕ್ಕೆ ‘ಶಕ್ತಿ’ಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಚಾಲನೆ ನೀಡಿದರು. ಶಿಬಿರದಲ್ಲಿ ಗ್ಯಾಸ್ಟ್ರಿಕ್, ಮೂಳೆ ನೋವು, ನರದೌರ್ಬಲ್ಯ, ರಕ್ತ ಹೀನತೆ, ಸ್ತ್ರೀ ರೋಗಕ್ಕೆ ಸಂಬಂಧಿಸಿದಂತೆ ಇನ್ನೂರಕ್ಕೂ ಹೆಚ್ಚು ರೋಗಿಗಳು ಪಾಲ್ಗೊಂಡು ಚಿಕಿತ್ಸೆ ಪಡೆದರು. ಹೈಮಾಸ್ ಕೇಂದ್ರದ ಸಂಸ್ಥಾಪಕ, ಉದರ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಹರೀಶ್, ಸ್ತ್ರೀ ರೋಗ ತಜ್ಞ ಡಾ. ನಟರಾಜ್, ನೋವಿನ ತಜ್ಞ ಡಾ. ಅಶೋಕ್ ಇವರುಗಳನ್ನೊಳಗೊಂಡ ಸುಮಾರು 15 ಮಂದಿಯ ತಂಡ ಶಿಬಿರವನ್ನು ನಡೆಸಿಕೊಟ್ಟಿತು.

ಶಿಬಿರದ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ ಡಾ. ಹರೀಶ್ ಇಂದಿನ ಶಿಬಿರದಲ್ಲಿ ಮೂಳೆ ನೋವು, ನರದೌರ್ಬಲ್ಯ ಸಂಬಂಧ ಹೆಚ್ಚಿನ ರೋಗಿಗಳು ಚಿಕಿತ್ಸೆ ಪಡೆದಿರುವದಾಗಿ ತಿಳಿಸಿದರು. ಹಾಲು ಸೇವನೆ, ಮೊಳಕೆ ಕಾಳುಗಳ ಸೇವನೆಯಿಂದ ಮೂಳೆ ನೋವು, ನರದೌರ್ಬಲ್ಯವನ್ನು ಕಡಿಮೆ ಮಾಡಬಹುದಾಗಿದೆ. ನೋವು ಕಾಣಿಸಿಕೊಂಡ ತಕ್ಷಣ ಎಕ್ಸ್‍ರೇ ಮಾಡಿಕೊಂಡು ಚಿಕಿತ್ಸೆ ಪಡೆಯುವದು ಒಳಿತು ಎಂದು ಸಲಹೆಯಿತ್ತ ಅವರು ರೋಗಿಗಳು ಯಾವದೇ ಖಾಯಿಲೆಯ ಬಗ್ಗೆ ನಿರ್ಲಕ್ಷ್ಯ ತೋರದಂತೆ ಸಲಹೆಯಿತ್ತರು.

ಬೆಂಗಳೂರು ಬಸವನ ಗುಡಿಯಲ್ಲಿರುವ ಹೈಮಾಸ್ ಕೇಂದ್ರವು ಬಡವರು, ರೈತರು ಹಾಗೂ ವಿಶೇಷ ಚೇತನರಿಗೆ ಉಚಿತ ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಾ ಬಂದಿದ್ದು, ಇದನ್ನು ಜನತೆ ಸದುಪಯೋಗಪಡಿಸಿಕೊಳ್ಳಬಹುದು ಎಂದು ಡಾ. ಹರೀಶ್ ಮಾಹಿತಿಯಿತ್ತರು. ಶಿಬಿರದ ಉಸ್ತುವಾರಿಯನ್ನು ದಿ. ಡಾ. ಸುರೇಶ್ ಅವರ ಪತ್ನಿ ಪ್ರಕೃತಿ ಸುರೇಶ್ ವಹಿಸಿದರು.