ಶ್ರೀಮಂಗಲ, ಆ. 20: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಯನ್ನು ಯಶಸ್ವಿಯಾಗಿ ಪೂರೈಸಿದೆ.

ಆದರೆ, ಕೇಂದ್ರದ ಮೋದಿ ಸರ್ಕಾರ ಕಪ್ಪು ಹಣವನ್ನು ವಿದೇಶದಿಂದ ತಂದು ಎಲ್ಲರ ಖಾತೆಗಳಿಗೆ ರೂ. 15 ಲಕ್ಷ ಹಂಚುತ್ತೇವೆ ಎಂಬ ಭರವಸೆ ನೀಡಿ ನೋಟು ಅಮಾನ್ಯೀಕರಣ ಮಾಡಿ ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡಿ ಕಪ್ಪು ಹಣ ದಂಧೆಯನ್ನು ಮುಚ್ಚಿ ಹಾಕಿ ಉದ್ಯಮಿಗಳ ಸಾಲ ಮನ್ನಾ ಮಾಡಿ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಚೆಪ್ಪುಡಿರ ಅರುಣ್ ಮಾಚಯ್ಯ ಆರೋಪಿಸಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ವತಿಯಿಂದ ಮತ್ತೂರು ಸಮುದಾಯ ಭವನದಲ್ಲಿ ನಡೆದ ಕಿರುಗೂರು ಗ್ರಾ.ಪಂ. ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ಕಾರ್ಯಕರ್ತರು ಒಂದಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಬೇಕಾಗಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಕರ್ನಾಟಕದಲ್ಲಿ ಬಹುಮತದಿಂದ ಅಧಿಕಾರಕ್ಕೆ ಬರಲಿದ್ದು, ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಕೊಡಗಿನ 2 ಕ್ಷೇತ್ರಗಳಲ್ಲಿ ಪಕ್ಷದ ಶಾಸಕರನ್ನು ಆರಿಸಿ ಕಳುಹಿಸುವ ಮಹತ್ತರ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ವಿವಿಧ ಇಲಾಖೆಗಳ ಮುಖಾಂತರ ಅನುದಾನವನ್ನು ನೀಡಿದೆ. ಆದರೆ, ಶಾಸಕ ಕೆ.ಜಿ. ಬೋಪಯ್ಯ ಕಾಂಗ್ರೆಸ್ ಪಕ್ಷದ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ ತಮ್ಮ ಅನುದಾನವೆಂದು ಸಾರ್ವಜನಿಕ ವಲಯದಲ್ಲಿ ಬಿಂಬಿಸಿಕೊಂಡು ಉದ್ಘಾಟನೆ ಮಾಡುತ್ತಿರುವದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ ಕಾರ್ಯಕರ್ತರು ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸವನ್ನು ಪ್ರತಿ ಮನೆ ಮನೆಗಳಿಗೆ ಮುಟ್ಟಿಸುವಂತೆ ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ವೇದಿಕೆಯಲ್ಲಿ ಕಿರುಗೂರು ವಲಯ ಕಾಂಗ್ರೆಸ್ ಅಧ್ಯಕ್ಷ ಚೆಪ್ಪುಡಿರ ಬೋಪಣ್ಣ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮುಖಂಡ ಜಮ್ಮಡ ಸೋಮಣ್ಣ, ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಅಚ್ಚುತ್ತನ್, ತಾ.ಪಂ. ಸದಸ್ಯೆ ಮೂಕಳೇರ ಆಶಾ ಪೂಣಚ್ಚ, ಹಿಂದುಳಿದ ವರ್ಗದ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಸಾಜಿ, ಗ್ರಾ.ಪಂ. ಸದಸ್ಯರಾದ ವಿಮಲ, ಗಿರೀಶ್, ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.