ಶ್ರೀಮಂಗಲ, ಆ. 20: ಕಳೆದ 2 ವರ್ಷಗಳ ಹಿಂದೆ ಮೈಸೂರಿನಿಂದ ಕೇರಳದ ಕೊಯಿಕೋಡ್‍ಗೆ ಕೊಡಗು ಜಿಲ್ಲೆಯ ಮೂಲಕ 400 ಕೆ.ವಿ ಹೈಟೆನ್‍ಷನ್ ವಿದ್ಯುತ್ ಮಾರ್ಗ ರೂಪಿಸುವ ಸಂದರ್ಭ ಕೊಡಗು ಜಿಲ್ಲೆಯಲ್ಲಿ 54 ಸಾವಿರ ಮರಗಳ ಹನನವಾಗಿದೆ. ಇದರ ದುಷ್ಪರಿಣಾಮ ಮುಂಗಾರುವಿನ ಮಳೆ ಕೊರತೆ ಎದುರಾಗಿದೆ. ಮುಂಗಾರಿನಲ್ಲಿಯೇ ಕುಡಿಯಲು ನೀರಿಲ್ಲ. ಮತ್ತೊಂದು ಕಡೆ ಕೃಷಿಗೂ ನೀರು ಲಭ್ಯವಿಲ್ಲದೆ ಸಮಸ್ಯೆ ಎದುರಾಗಿದೆ. ಇಂತಹ ದುಷ್ಪರಿಣಾಮ ನಮ್ಮ ಕಣ್ಣೆದುರೇ ಇರುವಾಗ ಕೊಡಗು ಜಿಲ್ಲೆಯ ಮೂಲಕ 4 ರಾಷ್ಟ್ರೀಯ ಹೆದ್ದಾರಿ ಹಾಗೂ 3 ರೈಲ್ವೆ ಮಾರ್ಗವನ್ನು ರೂಪಿಸಲು ಉದ್ದೇಶಿಸಿರುವದು ವಿನಾಶಕಾರಿ ಯೋಜನೆ ಇದಾಗಿದೆ. ಇದರ ವಿರುದ್ಧ ‘ಕೊಡಗು ಉಳಿಸಿ ಮತ್ತು ಕಾವೇರಿ ನದಿಯನ್ನು ಉಳಿಸಿ’ ಎನ್ನುವ ಪ್ರತಿಭಟನಾ ರ್ಯಾಲಿಯನ್ನು ತಾ.26ರಂದು ಕುಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಕೊಡಗು ಉಳಿಸಿ ಹಾಗೂ ಕಾವೇರಿ ನದಿ ಉಳಿಸಿ

(ಮೊದಲ ಪುಟದಿಂದ) ಅಂದೋಲನದ ಸಂಘಟಕ ನಿವೃತ್ತ ಕರ್ನಲ್ ಚೆಪ್ಪುಡಿರ ಪಿ.ಮುತ್ತಣ್ಣ ತಿಳಿಸಿದ್ದಾರೆ.

ಗೋಣಿಕೊಪ್ಪದ ಸ್ಫೈಸ್ ರಾಕ್ ಸಭಾಂಗಣದಲ್ಲಿ ವಿವಿಧ ಸಂಘಟನೆಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದರು. ಈಗಾಗಲೇ ಜೂನ್ 2ರಂದು ಮಡಿಕೇರಿಯಲ್ಲಿ ಈ ಯೋಜನೆಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಒಂದೆರಡು ಪ್ರತಿಭಟನೆ ನಡೆಸಿದರೆ ಈ ಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಇದನ್ನು ಅಂದೋಲನವಾಗಿ ಜನರ ಸಹಬಾಗಿತ್ವದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

4 ರಾಷ್ಟ್ರೀಯ ಹೆದ್ದಾರಿ, 2 ರೈಲ್ವೆ ಮಾರ್ಗ: ಪುಟ್ಟ ಕೊಡಗು ಜಿಲ್ಲೆಯ ಮೂಲಕ ಕೊಡ್ಲಿಪೇಟೆ - ಕುಟ್ಟ (ಸೋಮವಾರಪೇಟೆ, ಮಡಿಕೇರಿ - ವೀರಾಜಪೇಟೆ - ಗೋಣಿಕೊಪ್ಪ - ಹುದಿಕೇರಿ - ಶ್ರೀಮಂಗಲ ಮೂಲಕ), ಪಾಣತ್ತೂರ್ - ಭಾಗಮಂಡಲ -ಮಡಿಕೇರಿ, ಕಣ್ಣೂರ್ -ವೀರಾಜಪೇm,É ಮೈಸೂರು - ತಿತಿಮತಿ -ಗೋಣಿಕೊಪ್ಪ - ವೀರಾಜಪೇಟೆ, ಅಲ್ಲದೆ ಮೈಸೂರು - ಮಡಿಕೇರಿ - ಮಂಗಳೂರು ಮೂಲಕ ರಾಷ್ಟ್ರೀಯ ಹೆದ್ದಾರಿ ಮಾಡಲು ಉದ್ದೇಶಿಸಲಾಗಿದ್ದು ಇದಲ್ಲದೆ, ಮೈಸೂರು - ಕುಶಾಲನಗರ - ಮಕ್ಕಂದೂರು ಹಾಗೂ ಕಣ್ಣೂರು - ಮೈಸೂರು(ತಿತಿಮತಿ-ಪೊನ್ನಂಪೇಟೆ-ಬಿರುನಾಣಿ ಮೂಲಕ) ರೈಲು ಮಾರ್ಗ ಮತ್ತು ಕಣ್ಣೂರು- ಮೈಸೂರು ಮಾರ್ಗವನ್ನು ಮಡಿಕೇರಿ-ಮಕ್ಕಂದೂರು ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ರೂಪಿಸಲಾಗಿದೆ. ಈ ಮೂಲಕ ಕೊಡಗನ್ನು ಸಂಪೂರ್ಣವಾಗಿ ನಾಶ ಮಾಡುವ ಹುನ್ನಾರ ನಡೆದಿದ್ದು, ಈ ಯೋಜನೆಯ ವಿರುದ್ಧ ಹೋರಾಟ ಮಾಡಿ ಕೊಡಗನ್ನು ರಕ್ಷಿಸಬೇಕಾದ ಅನಿವಾರ್ಯತೆ ಜಿಲ್ಲೆಯ ಪ್ರತಿಯೊಬ್ಬರಲ್ಲಿದೆ ಎಂದು ಮುತ್ತಣ್ಣ ಅವರು ಹೇಳಿದರು.

ಈ ಯೋಜನೆಗಳು ಯಾವದೇ ರೀತಿಯಲ್ಲಿ ಪ್ರಯೋಜನವಾಗುವದಿಲ್ಲ. ಕೊಡಗಿನಾದ್ಯಂತ ಲಕ್ಷಾಂತರ ಮರಗಳನ್ನು ಹನನಗೊಳಿಸಲಾಗುತ್ತದೆ. ಇದರಿಂದ ಕೊಡಗಿಗೆ ಮತ್ತಷ್ಟು ನಷ್ಟವಾಗುತ್ತದೆ. ಪರಿಸರ ನಾಶದಿಂದ ಕಾಡಾನೆ ಸಮಸ್ಯೆ ಹೆಚ್ಚು ಗಂಭೀರಗೊಳ್ಳುತ್ತದೆ. ಅಲ್ಲದೆ, ಜಿಲ್ಲೆ ಶೀಘ್ರದಲ್ಲೇ ಪರಿಸರ ನಾಶದಿಂದ ಮರುಭೂಮಿಯಾಗಿ ಪರಿವರ್ತನೆಯಾಗುತ್ತದೆ ಮತ್ತು ಕಾವೇರಿ ನದಿ ಹಾಗೂ ಅದರ ಉಪ ನದಿ ಸಹ ಬರಡಾಗುವ ಅತಂಕವಿದೆ ಎಂದು ಎಚ್ಚರಿಸಿದರು.

ಕೊಡಗು ಜಿಲ್ಲೆಯ ಮೂಲಕ ರೈಲು ಮತ್ತು ಹೆದ್ದಾರಿ ಯೋಜನೆಗಳನ್ನು ಮಾಡಲು 6 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಕೊಡಗಿಗೆ ಮಾರಕವಾದ ಈ ಯೋಜನೆಗೆ ಬಳಸುವÀ ಮೊತ್ತವನ್ನು ಕರ್ನಾಟಕದಲ್ಲಿ ಮಲೆನಾಡು ಪ್ರದೇಶಗಳ ಸುಧಾರಣೆಗೆ ಬಳಸಬಹುದಾಗಿದೆ. ಅಂತರ್ಜಲವೃದ್ಧಿ ಹಾಗೂ ಜೇನು ಸಾಕಾಣೆ, ಪಷ್ಪೋದ್ಯಮ, ಜಲಾನಯನ ಮತ್ತು ಅರಣ್ಯ ಪ್ರದೇಶಗಳ ಸುಧಾರಣೆ, ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕೆ ವಿನಿಯೋಗಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಕೊಡಗು ಜಿಲ್ಲೆಯಲ್ಲಿ 6 ಲಕ್ಷ ಜನ ವಾಸಿಸುತ್ತಿದ್ದು, ಇಲ್ಲಿಗೆ ಕಳೆದ ವರ್ಷದಲ್ಲಿ 13 ಲಕ್ಷ ಜನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೊಡಗಿಗೆ ಪ್ರವಾಸೋದ್ಯಮದಿಂದ ದಕ್ಕೆಯಾಗುತ್ತಿದೆ. ರೈಲ್ವೆ ಮಾರ್ಗ ಅವಶ್ಯವಿಲ್ಲ. ಒಂದುವರೆ ಗಂಟೆಯಲ್ಲಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ತೆರಳಿ ರೈಲ್ವೆ ಸೌಲಭ್ಯ ಪಡೆಯಲು ಅವಕಾಶವಿದೆ ಎಂದು ಹೇಳಿದರು.

ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಂiÀiನ್ ಭೇಟಿ ಮಾಡಿ ಮಟ್ಟನೂರು ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಚತುಷ್ಪಥ ರಸ್ತೆ ಸೌಲಭ್ಯವನ್ನು ಕೊಡಗಿನ ಮೂಲಕ ಮಾಡಿಕೊಡುವಂತೆ ಮನವಿ ಮಾಡಿದ್ದು ಇದಕ್ಕೆ ನಿತಿನ್ ಗಡ್ಕರಿಯವರು ಸ್ಪಂದಿಸಿದ್ದಾರೆ ಎಂದು ಬಹಿರಂಗಗೊಳಿಸಿದರು. ವಸ್ತು ಸ್ಥಿತಿಯನ್ನು ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗುವದೆಂದು ಹೇಳಿದರು.

ಈಗಾಗಲೇ ಜಿಲ್ಲೆಯ ಹಾಲಿ, ಮಾಜಿ ಸಂಸದರು, ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರು ಹಾಗೂ ಜನಪ್ರತಿನಿಧಿಗಳಿಗೆ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಕೊಡಗನ್ನು ಸಂರಕ್ಷಿಸುವ ಬಗ್ಗೆ ಮನವಿ ಪತ್ರ ಸಲ್ಲಿಸಲಾಗಿದೆ. ಇವರೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಭಿಪ್ರಾಯಪಟ್ಟರು.

ತಾ.26ರಂದು ರ್ಯಾಲಿಯೂ ಪೊನ್ನಂಪೇಟೆ ಬಸ್ ನಿಲ್ದಾಣದಿಂದ 9 ಗಂಟೆಗೆ ಆರಂಭವಾಗಿ ಹುದಿಕೇರಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ ಮೂಲಕ ಕುಟ್ಟದಲ್ಲಿ 11 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ವಾಹನಗಳು ಮತ್ತು ಜನರು ಕಪ್ಪು ಧ್ವಜ ಹಾಗೂ ಕಪ್ಪು ಪಟ್ಟಿಗಳನ್ನು ಕಟ್ಟಿ ಭಾಗವಹಿಸಬೇಕು ಎಂದು ತಿಳಿಸಿದರು.

ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಗಣಪತಿ ಮಾತನಾಡಿ ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ ಜಿಲ್ಲೆಗೆ ವಿನಾಶಕಾರಿಯಾಗಿದ್ದು, ಇದನ್ನು ತಡೆಹಿಡಿಯಲು ಜಿಲ್ಲೆಯ ಪ್ರತಿಯೊಬ್ಬರು ಜಾತಿ ಭೇದ ಮರೆತು ರಾಜಕೀಯ ರಹಿತವಾಗಿ ಹೋರಾಟ ನಡೆಸಬೇಕೆಂದು ಹೇಳಿದರು.

ವೀರಾಜಪೇಟೆ ತಾಲೂಕು ಬೆಳೆಗಾರ ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ ಮಾತನಾಡಿ ಕೊಡಗಿನ ಜನರು ಮುಖ್ಯವಾಗಿ ಕೃಷಿಯನ್ನೇ ಅವಲಂಬಿಸಿದ್ದು ಈಗಾಗಲೇ ಹೈಟೆನ್‍ಷನ್ ಮಾರ್ಗದಿಂದ ಸಾವಿರಾರು ಮರಗಳು ನಾಶವಾಗಿ ಜಿಲ್ಲೆಯಲ್ಲಿ ಕಳೆದ 3 ವರ್ಷದಿಂದ ಬರಗಾಲ ಉಂಟಾಗಿದೆ. ಮತ್ತೆ ಇಂತಹ ಮಾರಕ ಯೋಜನೆಗಳನ್ನು ರೂಪಿಸುವ ಮೂಲಕ ಜಿಲ್ಲೆಯ ಕಾಫಿ ತೋಟ ಹಾಗೂ ಕೃಷಿ ಮಾಡಲು ಸಂಕಷ್ಟ ಎದುರಾಗುವ ಅಪಾಯವಿದೆ ಎಂದು ಎಚ್ಚರಿಸಿದರು.

ಪೊನ್ನಂಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಚೊಟ್ಟೇಕಮಾಡ ರಾಜೀವ್ ಬೋಪಯ್ಯ ಮಾತನಾಡಿ ಇದು ಜಿಲ್ಲೆಯ ಅಸ್ಥಿತ್ವದ ಪ್ರಶ್ನೆಯಾಗಿದೆ. ಸ್ವಹಿತಸಕ್ತಿ ಬಿಟ್ಟು ಜಿಲ್ಲೆಯ ಸಂರಕ್ಷಣೆಗೆ ಮುಂದಾಗಬೇಕು. ನಾಡು ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎನ್ನುವ ಕಟು ಸತ್ಯವನ್ನು ಅರಿತುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ ಜಿಲ್ಲೆಯ ಮನುಕುಲಕ್ಕಾಗಿ ಪರಿಸರವನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ. ಪ್ರಾಣಿಪಕ್ಷಿ, ಕಾಫಿ ತೋಟ ಕೃಷಿ ಉಳಿಸಿಕೊಳ್ಳಲು ಮಾರಕ ಯೋಜನೆ ವಿರುದ್ಧ ಹೋರಾಟ ಅಗತ್ಯವೆಂದರು.

ಹಲವು ಸಂಘಟನೆಗಳ ಬೆಂಬಲ: ‘ಕೊಡಗು ರಕ್ಷಿಸಿ ಹಾಗೂ ಕಾವೇರಿ ನದಿ ಉಳಿಸಿ’ ಅಂದೋಲನಕ್ಕೆ ಈಗಾಗಲೇ ಪೊನ್ನಂಪೇಟೆ ಹಾಗೂ ಮಡಿಕೇರಿಯಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಲಾಗಿದೆ. ಈ ಹೋರಾಟಕ್ಕೆ ಪೊನ್ನಂಪೇಟೆ, ಮಡಿಕೇರಿ ಕೊಡವ ಸಮಾಜ, ಫೀ.ಮಾ ಕಾರ್ಯಪ್ಪ, ಜ. ತಿಮ್ಮಯ್ಯ ಫೋರಂ, ಅಖಿಲ ಅಮ್ಮಕೊಡವ ಸಮಾಜ, ಯುಕೊ, ವೀರಾಜಪೇಟೆ ತಾ.ಬೆಳೆಗಾರರ ಒಕ್ಕೂಟ, ಬೆಳೆಗಾರ ಒಕ್ಕೂಟದ ಮಹಿಳಾ ಘಟಕ, ಅಮ್ಮತ್ತಿ ರೈತ ಸಂಘ, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ, ಭಾರತೀಯ ಕಿಸಾನ್ ಸಂಘ, ಕೊಡಗು ವನ್ಯಜೀವಿ ಸಂಘ, ಪೊನ್ನಂಪೇಟೆ ಮಾಜಿ ಸೈನಿಕರ ಸಂಘ, ಕೊಡವ ಮಕ್ಕಡ ಕೂಟ, ಚೇರಂಗಾಲ ಕನ್ನಿಕಾವೇರಿ ಟ್ರಸ್ಟ್, ಕೊಡಗು ಸತ್ಯಾನ್ವೇಷಣೆ ಸಮಿತಿ, ಕಾವೇರಿ ಸ್ವಚ್ಚತಾ ಅಂದೋಲನ, ಕ್ಲೀನ್ ಕೊಡಗು ಇನ್ಸೇಟಿವ್, ಸೇವ್ ರಿವರ್ ಫೋರಂ ಅರ್ಗನೈಸೆಸನ್, ಬಸವಣ್ಣ ದೇವರ ಬನ ಸಮಿತಿ, ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಕೊಡವ ಸಮಾಜಗಳು ಹೋರಾಟಕ್ಕೆ ಬೆಂಬಲ ನೀಡುವ ಭರವಸೆಯಿದೆ ಎಂದು ಮುತ್ತಣ್ಣ ತಿಳಿಸಿದರು.

ಸಭೆಯಲ್ಲಿ ಬೆಳೆಗಾರ ಒಕ್ಕೂಟದ ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ಪೊನ್ನಂಪೇಟೆ ಎಪಿಸಿಎಂಎಸ್ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ, ಬೆಳೆಗಾರ ಒಕ್ಕೂಟದ ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ ಮತ್ತಿತರರು ಹಾಜರಿದ್ದರು.