ವೀರಾಜಪೇಟೆ, ಆ. 20: ವೀರಾಜಪೇಟೆ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿಯಿಂದ ತಾ. 25 ರಿಂದ ಗೌರಿ ಗಣೇಶ ಉತ್ಸವದ ಆಚರಣೆ ಪ್ರಯುಕ್ತ ಪೂರ್ವ ಸಿದ್ಧತೆ ನಡದಿದೆ ಎಂದು ಸಮಿತಿಯ ಅಧ್ಯಕ್ಷ ಎನ್. ಗೋಪಾಲಕೃಷ್ಣ ಕಾಮತ್ ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಐತಿಹಾಸಿಕ ಪ್ರಸಿದ್ಧವಾದ ಶತಮಾನಗಳ ಹಿಂದಿನ ಇತಿಹಾಸ ಹೊಂದಿರುವ ಇಲ್ಲಿನ ಬಸವೇಶ್ವರ ದೇವಸ್ಥಾನದ ಉತ್ಸವ ಸಮಿತಿ ಎಲ್ಲ ಧರ್ಮಗಳ ಬೆಸುಗೆಯೊಂದಿಗೆ ಅನ್ಯೋನ್ಯತೆಯಿಂದ ಜಾತ್ಯತೀತವಾಗಿ ಅನೇಕ ದಶಕಗಳಿಂದ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವು ಉತ್ಸವವನ್ನು 11ದಿನಗಳವರೆಗೆ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಗುವದು. ತಾ. 26 ರಿಂದ ಸೆಪ್ಟಂಬರ್ 4 ರವರೆಗೆ ದೇವಾಲಯದ ಮುಂದೆ ಹಾಕಿರುವ ಪೆಂಡಾಲ್‍ನಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಂಸ್ಕøತಿ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ತಾ. 5 ರಂದು ಗೌರಿಗಣೇಶನ ವಿಸರ್ಜನೋತ್ಸವ ಅದ್ದೂರಿಯಿಂದ ನಡೆಯಲಿದೆ ಎಂದರು.

ಉತ್ಸವ ಸಮಿತಿಯ ಜೆ.ಎನ್. ಸಂಪತ್ ಕುಮಾರ್ ಮಾತನಾಡಿ ಮಂಜೇಶ್ವರದ ಕೀರ್ತಿ ಎಲೆಕ್ಟ್ರಿಕಲ್ಸ್ ಅವರಿಂದ ವಿದ್ಯುತ್ ದೀಪಗಳ ಅಲಂಕಾರ, ಸಿದ್ದಾಪುರದ ಪಿ.ಎಚ್.ಸೌಂಡ್ಸ್ ಅವರಿಂದ ಪೆಂಡಾಲ್ ನಿರ್ಮಾಣ ನಡೆಯಲಿದೆ. ಮೂರ್ತಿಗಳ ವಿಸರ್ಜನೋತ್ಸವದ ದಿನದಂದು ರಾತ್ರಿ 8-30ಗಂಟೆಗೆ ಬಂಟ್ವಾಳದ ಕೀಲು ಕುದುರೆ, ಅನಾರ್ಕಲಿ ವಿವಿಧ ವಿನೋಧಾವಳಿಗಳ ಪ್ರದರ್ಶನ ಹಾಗೂ ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.

ಗೌರಿ ಪಲ್ಲಕ್ಕಿ ಉತ್ಸವ

ಗೌರಿ ಗಣೇಶ ಉತ್ಸವ ಸಮಿತಿಯಿಂದ ವೀರಾಜಪೇಟೆಯಲ್ಲಿ ಮಾತ್ರ ಐತಿಹಾಸಿಕ ಗೌರಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಗಣೇಶನ ಜೊತೆಯಲ್ಲಿಯೇ ಪವಿತ್ರ ಗೌರಿಗೂ ನಿರಂತರ ಪೂಜೆ ನಡೆಯಲಿದೆ. ಗಣೇಶನ ಜೊತೆ ವಿಸರ್ಜನೋತ್ಸವವೂ ಜರುಗಲಿದೆ.

ತಾ. 24 ರಂದು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ದೇಶದ ಪಲ್ಲಕ್ಕಿ ಉತ್ಸವದ ಮೆರವಣಿಗೆ ಸಿದ್ದಾಪುರ ರಸ್ತೆಯ ಡಾ. ಎನ್.ಬಿ. ಉತ್ತಪ್ಪ ಅವರ ಕೆರೆಯಿಂದ ಪ್ರಾರಂಭವಾಗಿ ತೆಲುಗರಬೀದಿ, ಮುಖ್ಯ ಬೀದಿಗಳ ಮೂಲಕ ಮೆರವಣಿಗೆ ತೆರಳಿ ನಂತರ ವಾಪಸ್ಸಾಗಿ ಮೂರ್ನಾಡು ರಸ್ತೆ, ದೇವರ ಕಾಡು ರಸ್ತೆ, ಅಪ್ಪಯ್ಯ ಸ್ವಾಮಿ ರಸ್ತೆ ಮಾರ್ಗವಾಗಿ ಬಸವೇಶ್ವರ ದೇವಸ್ಥಾನ ತಲುಪಲಿದೆ ಎಂದು ತಿಳಿಸಿದ ಎನ್.ಜಿ. ಕಾಮತ್ ಅವರು ಗೌರಿ ಪಲ್ಲಕ್ಕಿ ಮೆರವಣಿಗೆ ಸಂದರ್ಭದಲ್ಲಿ ಪಲ್ಲಕ್ಕಿ ಗೌರಿಗೆ ಮುತ್ತೈದೆಯರಿಂದ ಬಾಗಿನ ಅರ್ಪಣೆ ಹಾಗೂ ಸಾಂಪ್ರದಾಯಿಕ ಪೂಜಾ ಸೇವೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಎನ್. ರಾಜೇಂದ್ರ ಕಾಮತ್, ಜೆ.ಎನ್. ಪುಷ್ಪರಾಜ್, ಬಿ.ಎ. ಅಂಬಿ ಕೃಷ್ಣಮೂರ್ತಿ, ಮೋಹನ್ ರಾಜ್, ಅರ್ಚಕ ಮೋಹನ್ ಉಪಸ್ಥಿತರಿದ್ದರು.