*ಗೋಣಿಕೊಪ್ಪಲು, ಆ. 20 : ಇಲ್ಲಿನ ಬೈಪಾಸ್ ರಸ್ತೆ ವೃತ್ತದಲ್ಲಿರುವ ಮದ್ಯದಂಗಡಿಯಿಂದ ಮೈಸೂರಮ್ಮ ನಗರಕ್ಕೆ ತೆರಳುವ ಮಹಿಳೆಯರು, ಮಕ್ಕಳು ಹಾಗೂ ವಿದಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಅರುವತ್ತೊಕ್ಕಲು ಮೈಸೂರಮ್ಮ ನಗರದ ಮಹಿಳೆಯರು ಹಾಗೂ ಪುರುಷರು ಇಂದು ಪ್ರತಿಭಟನೆ ನಡೆಸಿದರು.ಮೈಸೂರಮ್ಮ ನಗರದಿಂದ ತಂಡೋಪತಂಡವಾಗಿ ಬಂದ ನೂರಾರು ಮಹಿಳೆಯರು ಹಾಗೂ ಯುವಕರು ರಸ್ತೆ ಬದಿಯಲ್ಲಿರುವ ಮದ್ಯದಗಂಡಿಯಿಂದ ಪಾದಾಚಾರಿ ಮಹಿಳೆಯರಿಗೆ ತೀವ್ರ ತೊಂದರೆ ಯಾಗುತ್ತಿದೆ. ಪುರುಷರು ರಸ್ತೆಬದಿ ಯಲ್ಲಿ ನಿಂತು ಕುಡಿಯುತ್ತಿರುತ್ತಾರೆ. ಇದರಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಬಾಲಕಿಯರು ಹಾಗೂ ಮಹಿಳೆಯರಿಗೆ ತೀವ್ರ ಮುಜುಗರವಾಗುವದರ ಜೊತೆಗೆ ಭಯದ ವಾತಾವರಣವೂ ನಿರ್ಮಾಣ ವಾಗಿದೆ. ಜನವಸತಿ ಪ್ರದೇಶದಲ್ಲಿರುವ ಮದ್ಯದಂಗಡಿಯನ್ನು ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ತಾಲೂಕು ಅಬಕಾರಿ ಇನ್ಸ್‍ಪೆಕ್ಟರ್ ಲಕ್ಷ್ಮೀಶ ಮಾತನಾಡಿ ಮದ್ಯದಂಗಡಿ ಮಾಲಿಕರು ನಿಯಮಾವಳಿಯಂತೆ ಸರ್ಕಾರಕ್ಕೆ ನಿಗದಿತ ಶುಲ್ಕ ಕಟ್ಟಿ ಪರವಾನಗಿ ಪಡೆದಿದ್ದಾರೆ. ರಸ್ತೆಬದಿಯಲ್ಲಿ ನಿಂತು ಕುಡಿಯುವದನ್ನು ನಿರ್ಬಂಧಿಸ ಲಾಗುವದು. ಪಾದಾಚಾರಿಗಳಿಗೆ ತೊಂದರೆಯಾಗದಂತೆ ವ್ಯಾಪಾರ ವಹಿವಾಟು ನಡೆಸಲು ಮದ್ಯದಂಗಡಿ ಮಾಲಿಕರಿಗೆ ಸೂಚಿಸಲಾಗುವದು ಎಂದು ಹೇಳಿ ಪ್ರತಿಭಟನಾಕಾರರ ಮನವೊಲಿಸಿದರು.

ಸಬ್‍ಇನ್ಸ್‍ಪೆಕ್ಟರ್ ಎಚ್.ವೈ.ರಾಜು ಮಾತನಾಡಿ ಮದ್ಯದಂಗಡಿ ಮುಂದಿನ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸದಂತೆ ಎಚ್ಚರಿಕೆ ಫಲಕ ಹಾಕಲಾಗಿದೆ. ಜೊತೆಗೆ ದಾರಿಯಲ್ಲಿ ನಿಂತು ಕುಡಿಯುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ಹೇಳಿದರು.

ಆದರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಮುಂದೆ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ಏನಾದರೂ ತೊಂದರೆ ಯಾದರೆ ಇದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಪುಟಾಣಿ ಮಕ್ಕಳು ಮದ್ಯದಂಗಡಿ ಮುಚ್ಚಿಸಿ, ಮಕ್ಕಳ ಮತ್ತು ಮಹಿಳೆಯರ ರಕ್ಷಿಸಿ ಎಂದು ನಾಮಫಲಕ ಹಿಡಿದು ದಿಕ್ಕಾರ ಕೂಗುತ್ತಿರುವದು ಗಮನಸೆಳೆಯಿತು,

-ಎನ್.ಎನ್.ದಿನೇಶ್