ವೀರಾಜಪೇಟೆ, ಆ. 20: ಮನಸ್ಸು ಪರಿಶುದ್ಧವಾಗಿದ್ದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನುಚ್ಚುಮಣಿಯಂಡ ಎಂ. ನಾಣಯ್ಯ ಹೇಳಿದರು.ಕಾವೇರಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ಎನ್‍ಎಸ್‍ಎಸ್ ಘಟಕ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾದರೇ ತಮ್ಮ ಆರೋಗ್ಯ ಹಾಳಾಗುವದರೊಂದಿಗೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಮಾದಕ ವಸ್ತುಗಳಿಂದ ದೂರವಿರಬೇಕೆಂದು ಕರೆ ನೀಡಿದರು.

ಹಳ್ಳಿಗಳಲ್ಲಿಯೇ ಉತ್ತಮ ಪರಿಸರ, ಪರಂಪರೆ, ಸಂಸ್ಕøತಿ ಇರುತ್ತದೆ. ಆ ಕಾರಣಕ್ಕಾಗಿ ಎನ್‍ಎಸ್‍ಎಸ್ ವತಿಯಿಂದ ಹಳ್ಳಿ ಪ್ರದೇಶ ಆಯ್ಕೆ ಮಾಡಿಕೊಂಡು ಏಳು ದಿನಗಳ ವಿಶೇಷ ಶಿಬಿರ ಆಯೋಜಿಸಲಾಗುತ್ತದೆ. ಎನ್‍ಎಸ್‍ಎಸ್ ಕಾರ್ಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತಮ್ಮನ್ನು ತೊಡಗಿಸಿ ಕೊಳ್ಳಬೇಕೆಂದರು.

ಎನ್‍ಎಸ್‍ಎಸ್ ಘಟಕ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಶಾಲೆಯಲ್ಲಿ ನೀಡುವ ಶಿಕ್ಷಣವೇ ಬೇರೆ. ಸಮಾಜದಲ್ಲಿ ಸಿಗುವ ಶಿಕ್ಷಣವೇ ಬೇರೆ. ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜ ಸಿಗುವ ಶಿಕ್ಷಣದ ಅರಿವು ಹೊಂದಿರಬೇಕೆಂದರು.

ಮಕ್ಕಳ ಮೂಲಕ ಭವಿಷ್ಯ ಕಂಡುಕೊಳ್ಳುವ ಮನಸ್ಸು ಪೋಷಕರಲ್ಲಿರುತ್ತದೆ. ಪೋಷಕರಿಟ್ಟಿರುವ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುವ ಕೆಲಸವನ್ನು ಮಕ್ಕಳು ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ಪತ್ರಿಕೆ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಎಲ್ಲಾ ಧೋರಣೆಗಳನ್ನು ತಿಳಿದುಕೊಂಡು, ನಮ್ಮ ವೈಯುಕ್ತಿಕ ನಿಲುವು ರೂಪಿಸುವಂತಾಗಬೇಕೆಂದರು. ವೇದಿಕೆಯಲ್ಲಿ ಉಪನ್ಯಾಸಕ ಕರುಣ್‍ಕುಮಾರ್ ಇದ್ದರು. ಎನ್‍ಎಸ್‍ಎಸ್ ಶಿಬಿರಾಧಿಕಾರಿ ಕುಸುಮ ಸ್ವಾಗತಿಸಿದರು. ಉಪನ್ಯಾಸಕಿ ಎಂ.ಪಿ. ದಮಯಂತಿ ವಂದಿಸಿದರು.