ಕೂಡಿಗೆ, ಆ. 21: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಕೂಡಿಗೆಯ ಕ್ರೀಡಾಶಾಲಾ ಕ್ರೀಡಾಂಗಣದಲ್ಲಿ ಇಂದು ಚಾಲನೆಗೊಂಡಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಆರ್. ಮಂಜುಳಾ ನೆರವೇರಿಸಿ ಮಾತನಾಡುತ್ತಾ ದಸರಾ ಕ್ರೀಡಾಕೂಟವು ಇತಿಹಾಸ ಪ್ರಸಿದ್ಧ ಕ್ರೀಡಾಕೂಟವಾಗಿದೆ. ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ. ಎಲ್ಲರೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ತಾ.ಪಂ. ಸದಸ್ಯ ಗಣೇಶ್.ಡಿ.ಎಸ್. ಮಾತನಾಡುತ್ತಾ ಕ್ರೀಡಾಕೂಟಗಳು ಒಗ್ಗೂಡಿಕೆಗೆ ಸಹಕಾರಿ; ಇದನ್ನು ಕ್ರೀಡಾಪಟುಗಳು ಬಳಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿಬಾಯಿ, ದೈಹಿಕ ಶಿಕ್ಷಣ ಶಿಕ್ಷಕ ಮೃತ್ಯುಂಜಯ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಮಡಿಕೇರಿ ಕ್ರೀಡಾ ಇಲಾಖೆಯ ಅಧಿಕಾರಿ ರಮೇಶ್, ಕೂಡಿಗೆ ಕ್ರೀಡಾ ಶಾಲೆಯ ಹಿಂದಿ ಶಿಕ್ಷಕ ಪ್ರಮೋದ್‍ನಾಥ್, ಕ್ರೀಡಾಶಾಲೆ ತರಬೇತುದಾರ ಅಂತೋಣಿ ಡಿಸೋಜಾ, ಕೆ.ಕೆ.ಬಿಂದಿಯಾ, ಸಂಜಯ್ ಬಾಣದ್ ಸೇರಿದಂತೆ ಶಿಕ್ಷಕ ವೃಂದದವರು ಇದ್ದರು.

ರಮೇಶ್ ಕ್ರೀಡಾಪಟುಗಳಿಗೆ ದಸರಾ ಕ್ರೀಡಾಕೂಟದ ಸುತ್ತೊಲೆ ಹಾಗೂ ಪಾಲ್ಗೊಳ್ಳುವಿಕೆಯ ಬಗ್ಗೆ ಪ್ರಾಸ್ತಾವಿಕವಾಗಿ ನುಡಿದರು. ಕ್ರೀಡಾಕೂಟದಲ್ಲಿ ತಾಲೂಕಿನಾದÀ್ಯಂತ ಕ್ರೀಡಾಪಟುಗಳು ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ ಅಥ್ಲೆಟಿಕ್ ಮತ್ತು ಗುಂಪು ಸ್ಪರ್ಧೆಗಳು, ಮಹಿಳಾ ವಿಭಾಗದಲ್ಲಿ ಗುಂಪು ಸ್ಪರ್ಧೆ ಮತ್ತು ವೈಯಕ್ತಿಕ ಸ್ಪರ್ಧೆಗಳು ನಡೆದವು.