ಮಡಿಕೇರಿ, ಆ. 21: ನಾಡಪ್ರಭು, ಆದರ್ಶ ಆಡಳಿತಗಾರ ಕೆಂಪೇಗೌಡರ ಜಯಂತಿಯನ್ನು ತಾ. 31 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ನಾಡಪ್ರಭು ಕೆಂಪೇಗೌಡರ ಜಯಂತಿಯ ರಾಜ್ಯಮಟ್ಟದ ಕಾರ್ಯ ಕ್ರಮವು ಜುಲೈ, 27 ರಂದು ನಡೆದಿದ್ದು, ಆಗಸ್ಟ್ ಅಂತ್ಯದೊಳಗೆ ಕೆಂಪೇಗೌಡರ ಜಯಂತಿಯನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಬೇಕಿದೆ. ಈ ನಿಟ್ಟಿನಲ್ಲಿ ತಾ. 31 ರಂದು ಕಾರ್ಯಕ್ರಮ ಆಯೋಜಿ ಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಆದರ್ಶ ಆಡಳಿತಗಾರ, ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಲು ವಿವಿಧ ಸಂಘ ಸಂಸ್ಥೆ ಗಳು ಸಹಕರಿಸುವಂತೆ ಜಿಲ್ಲಾಧಿಕಾರಿ ಕೋರಿದರು. ಕಾರ್ಯಕ್ರಮವನ್ನು ಅರ್ಥಪೂರ್ಣ ವಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳ ಬೇಕು. ನಿಯಮಬದ್ಧವಾಗಿ ನಾಡಗೀತೆ ಹಾಡುವವರನ್ನು ಆಹ್ವಾನಿಸಬೇಕು. ಶಿಷ್ಟಾಚಾರದಂತೆ ಆಹ್ವಾನಪತ್ರ ಮುದ್ರಣ ಮಾಡುವದು, ಜನಪ್ರತಿನಿಧಿಗಳನ್ನು ಆಹ್ವಾನಿಸುವದು, ಹೀಗೆ ಹಲವು ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.

ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿಗೆ ಅಕಾಡೆಮಿ ವತಿಯಿಂದ ಅಗತ್ಯ ಸಹಕಾರ ನೀಡಲಾಗುವದು. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಕರೆತರಲಾಗುವದು ಎಂದು ಮಾಹಿತಿ ನೀಡಿದರು.

ಒಕ್ಕಲಿಗರ ಸಂಘದ ಯುವ ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಮಾತನಾಡಿ, ಮೈಸೂರು ಜಿಲ್ಲೆಯ ತಲಕಾಡು ಚಿಕ್ಕರಂಗೇಗೌಡ ಅವರನ್ನು ಮುಖ್ಯ ಭಾಷಣಕಾರರಾಗಿ ಆಹ್ವಾನಿಸ ಬೇಕು. ನಾಡಪ್ರಭು ಕೆಂಪೇಗೌಡರ ಭಾವಚಿತ್ರದೊಂದಿಗೆ ಸುಗ್ಗಿ ಮತ್ತು ಜಾನಪದ ಕಲಾವಿದರನ್ನು ಮೆರವಣಿಗೆಗೆ ಕರೆಸುವಂತಾಗಬೇಕು ಎಂದು ಮನವಿ ಮಾಡಿದರು.

ಮಳೆ ಇರುವ ಕಾರಣದಿಂದ ಮೆರವಣಿಗೆ ಆಯೋಜಿಸುವದು ಕಷ್ಟಸಾಧ್ಯವಾಗಲಿದೆ. ಈ ಬಗ್ಗೆ ಮುಂದೆ ನಿರ್ಧರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ವಿ.ಪಿ. ಸುರೇಶ್, ಎಂ.ಪಿ. ಕೃಷ್ಣರಾಜು, ಎಚ್.ಎನ್.ರಾಮಚಂದ್ರ, ಜಯರಾಜು, ನಾಗೇಗೌಡ, ಡಿ.ಎಚ್. ಲಿಂಗಪ,್ಪ ಒಕ್ಕಲಿಗರ ಸಂಘದ ಜಿಲ್ಲಾ ಸಮಿತಿ ಸದಸ್ಯೆ ಯಶೋಧ ಕುಶಾಲಪ್ಪ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ಅವರು ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಸರ್ಕಾರದ ನಿರ್ದೇಶನ ಮತ್ತಿತರ ಹಲವು ಮಾಹಿತಿ ನೀಡಿದರು.

ಪ್ರಮುಖರಾದ ಬಿ.ಬಿ. ಭಾರತೀಶ್, ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರೀಕಂಠ ಮೂರ್ತಿ, ಪೌರಾಯುಕ್ತರಾದ ಬಿ. ಶುಭ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ರಾಮಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಶರಥ ಎಂ. ದಾಮೋಜಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್. ಗಿರೀಶ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಟೇಶ್, ಶಿರಸ್ತೆದಾರ್ ಸತೀಶ್, ಜಿ.ಪಂ. ಇಂಜಿನಿಯರ್ ಮಂಜುನಾಥ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕುಮಾರ ಇತರರು ಇದ್ದರು.