ಗೋಣಿಕೊಪ್ಪಲು, ಆ. 21: ಹೊರಗಿನ ಜೇನು ತುಪ್ಪಗಳನ್ನು ಖರೀದಿಸಿ ತಂದು ಇಲ್ಲಿನ ಜೇನು ತುಪ್ಪದ ಮಹತ್ವವನ್ನು ಹಾಳು ಮಾಡುತ್ತಿರುವದು ವಿಪರ್ಯಾಸ ಎಂದು ಪೊನ್ನಂಪೇಟೆ ಅರಣ್ಯ ವಿಶ್ವವಿದ್ಯಾಲಯದ ಡೀನ್ ಚೆಪ್ಪುಡೀರ ಕುಶಾಲಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಪೊನ್ನಂಪೇಟೆ ಅರಣ್ಯ ವಿಶ್ವವಿದ್ಯಾಲಯ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ಕೆವಿಕೆ ಸಹಯೋಗದಲ್ಲಿ ನಡೆದ ವಿಶ್ವ ಜೇನು ನೊಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊಡಗಿನ ಜೇನು ತುಪ್ಪಕ್ಕೆ ಯಾವದೇ ಬ್ರಾಂಡ್ ಹೆಸರು ಅವಶ್ಯಕತೆ ಬರುವದಿಲ್ಲ. ಇಲ್ಲಿನ ಜೇನು ತುಪ್ಪ ಅದರದೇ ಆದ ಮಹತ್ವ ಹೊಂದಿದೆ. ಹೊರಗಿನ ಜೇನು ತುಪ್ಪಗಳನ್ನು ಖರೀದಿಸಿ ತಂದು ಇಲ್ಲಿನ ಜೇನು ತುಪ್ಪದ ಮಹತ್ವವನ್ನು ಹಾಳು ಮಾಡುತ್ತಿರುವದನ್ನು ತಡೆಯಬೇಕಿದೆ ಎಂದರು.

ಜೇನು ಹುಳದ ಪರಾಗ ಸ್ಪರ್ಶದಿಂದ ಕಾಫಿ ಬೆಳೆಯಲ್ಲಿ ಕಾಫಿ ಹೂಗಳಲ್ಲಿ ಇಳುವರಿ ಅಧಿಕ ಪಡೆಯಲು ಸಾಧ್ಯವಾಗಿದೆ. ಆಸಕ್ತ ರೈತರಿಗೆ ಮತ್ತು ಯುವ ರೈತರು ಕೃಷಿಯಲ್ಲಿ ತೊಡಗಿಕೊಳ್ಳಲು ಜಾಗೃತಿ ನೀಡುವ ಅವಶ್ಯಕತೆ ಇದೆ ಎಂದರು.

ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಗಿರೀಶ್ ಕುಮಾರ್ ಮಾತನಾಡಿ, ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ತೋಟಗಾರಿಕಾ ಇಲಾಖೆಯಲ್ಲಿ ಹಲವಾರು ಯೋಜನೆಗಳಿವೆ. 2 ದಿನದ ತರಗತಿಗಳ ಮೂಲಕ ಮಾಹಿತಿ ಒದಗಿಸ ಲಾಗುವದು. ಒಬ್ಬ ರೈತನಿಗೆ ಒಟ್ಟು 50 ಪೆಟ್ಟಿಗೆಗಳನ್ನು ನೀಡಲು ಅವಕಾಶವಿದೆ. ಫಲಾನುಭವಿಗಳಿಗೆ ಶೇಕಡ 90% ಸಹಾಯಧನ ನೀಡಲಾಗುತ್ತದೆ. ಭಾಗಮಂಡಲದ ಜೇನು ತುಪ್ಪ ಕೇಂದ್ರದಲ್ಲಿ ಮೂರು ತಿಂಗಳ ಕೋರ್ಸ್ ಮತ್ತು ಸಂಪನ್ಮೂಲ ವ್ಯಕ್ತಿಗಳ ಮೂಲಕ ತರಬೇತಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು ನಿರ್ದೇಶಕ ಮುಂಡಂಡ ನಾಣಯ್ಯ ಮಾತನಾಡಿ, ಜೇನು ನೊಣದ ಸಂರಕ್ಷಣೆ ಮಾಡಬೇಕು. ಜೇನು ನೊಣ ಶ್ರಮವಹಿಸಿ ತುಪ್ಪವನ್ನು ಉತ್ಪಾದಿಸುತ್ತದೆ. ಆದರೆ ಎಲ್ಲರೂ ಜೇನು ನೊಣವನ್ನು ಸಾಯಿಸಿ ತುಪ್ಪವನ್ನು ತೆಗೆಯುತ್ತಾರೆ. ಅದರ ಮಹತ್ವವವನ್ನು ತಿಳಿದುಕೊಂಡು ಸಂರಕ್ಷಿಸಬೇಕು ಮತ್ತು ಜೇನು ಕೃಷಿಗೆ ಒತ್ತು ನೀಡಬೇಕು. ಜೇನು ಕೃಷಿಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು ಸಾಲ ಸೌಲಭ್ಯವನ್ನು ಒದಗಿಸುತ್ತದೆ ಎಂದು ವಿವರಿಸಿದರು. ಜೇನು ನೊಣ ಇಲ್ಲದೇ ಇದ್ದರೆ ಆಹಾರ ಉತ್ಪಾದನೆ ನಿಂತು ಹೋಗುತ್ತದೆ ಎಂದು ಅರಣ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆಂಚರೆಡ್ಡಿ ರೈತರಿಗೆ ತಾಂತ್ರಿಕ ಮಾಹಿತಿಯಲ್ಲಿ ನೀಡಿದರು.

ಜೇನು ನೊಣವು ಕೃಷಿ ಚಟುವಟಿಕೆಯ ಒಟ್ಟು ಶೇ. 30 ಇಳುವರಿಯನ್ನು ಹೆಚ್ಚಿಸುತ್ತವೆ. ಜೇನು ನೊಣದ ಸಂಖ್ಯೆ ಕಡಿಮೆಯಾದರೆ ತರಕಾರಿ, ಹಣ್ಣು ಇಂತಹ ಬೆಳೆಗಳ ಇಳುವರಿ ಕಡಿಮೆಯಾಗುತ್ತದೆ. ಆದರಿಂದ ಜೇನು ನೊಣದ ಸಂರಕ್ಷಣೆ ಮಾಡುವದು ಉತ್ತಮ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸಾಜು ಜಾರ್ಜ್ ತಿಳಿಸಿದರು.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು ಉತ್ತರ ಕನ್ನಡ ನಿರ್ದೇಶಕ ಯೊಗೇಶ್, ಪುತ್ತರಿ ರೈತ ಉತ್ಪಾದಕರ ಸಂಘದ ಅಧ್ಯಕ್ಷ ದೇವಯ್ಯ ಹಾಗೂ ಕೆವಿಕೆ ಸಸ್ಯ ಸಂರಕ್ಷಣಾ ವಿಷಯ ತಜ್ಞ ವೀರೇಂದ್ರ ಕುಮಾರ್ ಉಪಸ್ಥಿತರಿದ್ದರು.