*ವೀರಾಜಪೇಟೆ, ಆ. 21: ಬ್ಲಾಕ್ ಮಟ್ಟದ ಸಭೆಯನ್ನು ತಾ. 23 ರಂದು ವೀರಾಜಪೇಟೆಯ ಪುರಭವನದಲ್ಲಿ 10 ಗಂಟೆಗೆ ಆಯೋಜಿಸಲಾಗಿದೆ ಎಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಸಲಾಂ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಭೆಗೆ ಎಐಸಿಸಿ ವೀಕ್ಷಕ ಹಾಗೂ ಕರ್ನಾಟಕ ಉಸ್ತುವಾರಿ ಪಿ.ಸಿ. ವಿಷ್ಣುನಾಥನ್, ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡುರಾವ್, ಎಂಎಲ್‍ಸಿ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಕೆಪಿಸಿಸಿ ಕಾರ್ಯದರ್ಶಿ ಅರುಣ್ ಮಾಚಯ್ಯ, ಕೆ.ಎಂ ಇಬ್ರಾಹಿಂ ಹಾಗೂ ಪಕ್ಷದ ಇತರ ಪ್ರಮುಖರು ಭಾಗವಹಿಸುತ್ತಾರೆ ಎಂದರು.
ಕಾಂಗ್ರೆಸ್ ವಕ್ತಾರ ಮಾದಂಡ ಪೂವಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಆಡಳಿತ ವೈಪಲ್ಯ, ಕಾರ್ಪೋರೇಟ್ ಸಂಸ್ಥೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವದು, ಕಸ್ತೂರಿ ರಂಗನ್ ವರದಿಯ ಬಗ್ಗೆ ಜಿಲ್ಲೆಯ ಸಂಸದರು ಹಾಗೂ ಶಾಸಕರು ಸ್ಪಷ್ಟತೆಯನ್ನು ನೀಡದೆ ಹಾರಿಕೆ ಉತ್ತರ ನೀಡುತ್ತಿದರಿಂದ ಜಿಲ್ಲೆಯ ಅಸ್ತಿತ್ವಕ್ಕೆ ದಕ್ಕೆ ಉಂಟಾಗುತ್ತಿರುವದು, ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ಚರ್ಚಿಸಲಾಗುವದು ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಮಾಳೇಟಿರ ಬೆಎಲ್ಲು ಬೋಪಯ್ಯ, ಚಟ್ಟಂಗಡ ರವಿ, ಗಾಯತ್ರಿ ರವಿ, ನಗರ ಅಧ್ಯಕ್ಷ ಜಿ.ಜಿ ಮೋಹನ್, ಯುವ ಕಾಂಗ್ರೆಸ್ ಅಧ್ಯಕ್ಷ ಚೆರಿನ್ ಚಂಗಪ್ಪ, ಬ್ಲಾಕ್ ಸೇವಾದಳದ ಅಧ್ಯಕ್ಷ ಶರಣು ನಂಜಪ್ಪ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ಕೆ.ವಿ ಪೌಲೋಸ್ ಉಪಸ್ಥಿತರಿದ್ದರು.
ಗೋಣಿಕೊಪ್ಪಲು: ತಾ. 23 ರಂದು ಪೊನ್ನಂಪೇಟೆಯಲ್ಲಿ ಕಾಂಗ್ರೆಸ್ ಪಕ್ಷ ಕೊಡಗು ಉಸ್ತುವಾರಿ ವಿಶ್ವನಾಥನ್ ಅವರ ಮುಂದಾಳತ್ವದಲ್ಲಿ ಕಾರ್ಯ ಕರ್ತರುಗಳ ಸಭೆ ನಡೆಯಲಿದೆ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ತಿಳಿಸಿದ್ದಾರೆ.
ಪೊನ್ನಂಪೇಟೆ ಮಹಿಳಾ ಸಮಾಜದಲ್ಲಿ ಬೆ. 11 ಗಂಟೆಗೆ ನಡೆಯುವ ಸಭೆಯಲ್ಲಿ ಕೊಡಗು ಉಸ್ತುವಾರಿ ವಿಶ್ವನಾಥನ್ ಅವರು ಪಕ್ಷ ಬಲವರ್ಧನೆಗೆ ಕಾರ್ಯಕ್ರಮ ರೂಪಿಸಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಬ್ಲಾಕ್‍ನ 21 ವಲಯಗಳಲ್ಲಿ ಸಭೆ ನಡೆಸಿ ಕಾರ್ಯಕರ್ತರುಗಳನ್ನು ಪುನರ್ ಸಂಘಟಿಸಲಾಗಿದೆ. ಶಾಸಕಿ ವೀಣಾ ಅಚ್ಚಯ್ಯ, ಸೇರಿದಂತೆ ಪಕ್ಷದ ಜಿಲ್ಲಾ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಡೇಮಾಡ ಕುಸುಮ ಜೋಯಪ್ಪ, ಹಿಂದುಳಿದ ವರ್ಗದ ಅಧ್ಯಕ್ಷ ಶಾಜಿ ಅಚ್ಚುತ್ತನ್, ಕಾರ್ಯದರ್ಶಿ ಕಾಡ್ಯಮಾಡ ಚೇತನ್, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ಉಪಸ್ಥಿತರಿದ್ದರು.
ಮೋಡ ಬಿತ್ತನೆಗೆ ಬೆಂಬಲ
ಕೊಡಗಿನ ಕಾವೇರಿ ಅಚ್ಚುಕಟ್ಟು ಪ್ರದೇಶಗಳಿಗೆ ರಾಜ್ಯ ಸರ್ಕಾರ ಉದ್ದೇಶಿಸಿರುವ ಮೋಡಬಿತ್ತನೆ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಮಾದಂಡ ಎಸ್. ಪೂವಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋಡ ಬಿತ್ತನೆ ಕಾರ್ಯ ಭತ್ತದ ಕೃಷಿಗೆ ಪೂರಕವಾಗಿದ್ದು ನೀರಿನ ಕೊರತೆಯನ್ನು ನೀಗಿಸುತ್ತದೆ. ಪ್ರಕೃತಿಗೆ ಅನುಕೂಲವಾಗುತ್ತದೆ. ರಾಸಾಯನಿಕ ಮಿಶ್ರಿತ ಮಳೆಯಿಂದ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಗೆ ಯಾವದೇ ಹಾನಿಯಾಗುವದಿಲ್ಲ. ಯಾವದೇ ಲಾಭ ನಷ್ಟಗಳ ತುಲನೆ ಇದ್ದರೂ ಮೋಡ ಬಿತ್ತನೆಯಿಂದ ಲಾಭವನ್ನು ಕಂಡುಕೊಂಡಿದ್ದೇವೆ. ಅದ್ದರಿಂದ ಮೋಡ ಬಿತ್ತನೆಗೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುತ್ತೇವೆ ಎಂದರು.