ಸೋಮವಾರಪೇಟೆ, ಆ. 21: ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ, ಮಾಜೀ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ದ ಕಾಂಗ್ರೆಸ್ ಸರ್ಕಾರ ಎಸಿಬಿ ಬಳಸಿಕೊಂಡು ದೂರು ದಾಖಲಿಸಿ ವಿನಾಕಾರಣ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರಪೇಟೆ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್ ಮಾತನಾಡಿ, ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಇದೀಗ ಎಸಿಬಿಯನ್ನು ಬಳಸಿಕೊಂಡು ಬಿಜೆಪಿ ನಾಯಕರ ವಿರುದ್ಧ ಸುಳ್ಳು ದೂರು ದಾಖಲಿಸುತ್ತಿದೆ. ಇದರೊಂದಿಗೆ ಸುಳ್ಳು ಸಾಕ್ಷ್ಯ ಹೇಳುವಂತೆ ಎಸಿಬಿ ಮೂಲಕ ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಅವರ ಮೇಲೆ ಒತ್ತಡ ಹೇರುತ್ತಿದೆ. ಇಂತಹ ಕೀಳುಮಟ್ಟದ ರಾಜಕೀಯವನ್ನು ಕರ್ನಾಟಕ ಹಿಂದೆಂದೂ ಕಂಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಬಾರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಭಯದಿಂದ ಸಿದ್ದರಾಮಯ್ಯನವರು ಧ್ವೇಷದ ರಾಜಕೀಯಕ್ಕೆ ಕೈಹಾಕಿದ್ದಾರೆ. ಅಭಿವೃದ್ಧಿ ಶೂನ್ಯವಾಗಿರುವ ಕರ್ನಾಟಕದಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೇ ನಡೆಯುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಯಡಿಯೂರಪ್ಪ ಅವರ ವಿರುದ್ಧ ದಾಖಲಿಸಿರುವ ಸುಳ್ಳು ದೂರನ್ನು ತಕ್ಷಣ ಹಿಂಪಡೆಯಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ನಂತರ ಇಲ್ಲಿನ ತಾಲೂಕು ಕಚೇರಿಗೆ ಆಗಮಿಸಿ ತಾಲೂಕು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಶಿಕ್ಷಕ ಪ್ರಕೋಷ್ಠದ ಅಧ್ಯಕ್ಷ ಜೆ.ಸಿ. ಶೇಖರ್, ಪ.ಪಂ. ಸದಸ್ಯರಾದ ಲೀಲಾ ನಿರ್ವಾಣಿ, ಸುಷ್ಮಾ, ಸುಶೀಲ, ಪ್ರಮುಖರಾದ ಟಿ.ಕೆ. ರಮೇಶ್, ಹಾಲಪ್ಪ ಶೆಟ್ಟಿ, ಕಿಬ್ಬೆಟ್ಟ ಮಧು, ಶರತ್‍ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.