ಕುಶಾಲನಗರ, ಆ. 21: ಕೊಡಗು ಜಿಲ್ಲೆಯನ್ನು ಅಪರಾಧ ಮುಕ್ತ ಹಾಗೂ ಅಪಘಾತ ಮುಕ್ತ ವಲಯವನ್ನಾಗಿಸಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕಾರ್ಯಯೋಜನೆಗಳನ್ನು ರೂಪಿಸಿದೆ ಎಂದು ರಾಷ್ಟ್ರಪತಿ ಪದಕ ಪುರಸ್ಕøತ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ಹೇಳಿದರು.
ಅವರು ಕುಶಾಲನಗರದಲ್ಲಿ ಪೊಲೀಸ್ ಉಪ ಅಧೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಕುಶಾಲನಗರ ಠಾಣಾ ಕಛೇರಿಗಳ ವತಿಯಿಂದ ಸ್ಥಳೀಯ ಕನ್ನಿಕಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆಯಾದ್ಯಂತ ಈಗಾಗಲೆ ಅಂದಾಜು ರೂ 70 ಲಕ್ಷ ವೆಚ್ಚದಲ್ಲಿ ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಹೆದ್ದಾರಿ ಮತ್ತು ಇತರ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಅಪರಾಧ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಹೆಚ್ಚಿನ ಭದ್ರತಾ ದೃಷ್ಠಿಯಿಂದ ಇನ್ನೂ 120 ಸಿಸಿ ಕ್ಯಾಮೆರಗಳ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುಶಾಲನಗರ, ಗೋಣಿಕೊಪ್ಪ ನಗರಗಳಲ್ಲಿ ಸಿಗ್ನಲ್ ಪಾಯಿಂಟ್ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ರೂ 1 ಕೋಟಿ ವೆಚ್ಚದ ಯೋಜನೆಗೆ ಇಲಾಖೆಯಿಂದ ಮನವಿ ಸಲ್ಲಿಸಲಾಗಿದೆ. ಸ್ಥಳೀಯ ವಿಧಾನ ಪರಿಷತ್, ಶಾಸಕರು ಹಾಗೂ ಸಂಸದರ ನಿಧಿಯಿಂದ ಇಲಾಖೆಗೆ ಅನುದಾನ ನೀಡಲು ಕೋರಲಾಗಿದೆ ಎಂದು ತಿಳಿಸಿದ ರಾಜೇಂದ್ರಪ್ರಸಾದ್, ನಾಗರಿಕರು ಮತ್ತು ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೊಡಗು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವಲ್ಲಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಜನತೆಯ ಸಹಕಾರದೊಂದಿಗೆ ಶಾಂತಿ ಮೂಡಿಸುವ ಕಾರ್ಯದಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳಾಡಿದ ಸೋಮವಾರಪೇಟೆ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಸಂಪತ್ಕುಮಾರ್, ಜಿಲ್ಲೆಯ ಹಲವೆಡೆ ಅಶಾಂತಿ ತಲೆದೋರಿದ್ದ ಸಂದರ್ಭ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಇಲಾಖೆಗೆ ಮಾರ್ಗ ದರ್ಶನ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಸೋಮವಾರಪೇಟೆ ಉಪವಿಭಾಗ, ಕುಶಾಲನಗರ ಪೊಲೀಸ್ ವೃತ್ತ, ಕುಶಾಲನಗರ ಗ್ರಾಮಾಂತರ ಹಾಗೂ ನಗರ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಸ್ಥಳೀಯ ವಿವಿಧ ಸಂಘಸಂಸ್ಥೆಗಳ ಪರವಾಗಿ ಪ್ರಮುಖರು ರಾಷ್ಟ್ರಪತಿ ಪದಕ ಪುರಸ್ಕøತ ರಾಜೇಂದ್ರಪ್ರಸಾದ್ ಅವರನ್ನು ಅಭಿನಂದಿಸಿ ಗೌರವಿಸಿದರು.
ಮಡಿಕೇರಿ ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಮೇದಪ್ಪ, ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ, ಸೋಮವಾರಪೇಟೆ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಎಂ.ಎಂ.ಚರಣ್, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಅಧಿಕಾರಿಗಳು ಇದ್ದರು. ಕುಶಾಲನಗರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಜೆ.ಇ.ಮಹೇಶ್ ಕಾರ್ಯಕ್ರಮ ನಿರೂಪಿಸಿದರು, ಕುಶಾಲನಗರ ಠಾಣಾಧಿಕಾರಿ ಜಗದೀಶ್ ವಂದಿಸಿದರು.