ಗೋಣಿಕೊಪ್ಪಲು, ಆ. 21: ಗೋವಧೆಯನ್ನು ಸಂಪೂರ್ಣವಾಗಿ ತಡೆಯದಿದ್ದಲ್ಲಿ ಗ್ರಾಮ ಮಟ್ಟದಿಂದ ಪ್ರತಿಭಟನೆ ನಡೆಸುವ ಮೂಲಕ ವಿರೋಧಿಸಲಾಗುವದು ಎಂದು ವಿಶ್ವ ಹಿಂದೂ ಪರಿಷದ್ ತಾಲೂಕು ಅಧ್ಯಕ್ಷ ಉದ್ದಪಂಡ ಜಗತ್ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಇಷ್ಟೊಂದು ಗೋವು ಸಾಗಾಟ ಗೋವಧೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗುತ್ತಿಲ್ಲ. ಹಿಂದೂ ಸಂಘಟನೆ ಕಾಯಕರ್ತರುಗಳು ಕಾರ್ಯಾಚರಣೆ ನಡೆಸಿದ ನಂತರ ದೂರು ದಾಖಲಿಸಿಕೊಳ್ಳುವ ಸ್ಥಿತಿ ತಲುಪಿದೆ. ಜಿಲ್ಲೆಯಲ್ಲಿ ಸಂಪೂರ್ಣವಾಗಿ ಗೋವಧೆ, ಗೋಮಾಂಸ ಬಳಕೆ ನಿರ್ಬಂಧವನ್ನು ಕಟ್ಟುನಿಟ್ಟಿನಲ್ಲಿ ಪಾಲಿಸದಿದ್ದಲ್ಲಿ ಸಂಘಟನೆ ವತಿಯಿಂದ ಗ್ರಾಮ ಮಟ್ಟದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವದು ಎಂದರು.
ಸಿದ್ದಾಪುರದ ನೆಲ್ಯಹುದಿಕೇರಿ ಯಲ್ಲಿ 4 ದಿನಗಳ ಹಿಂದೆ ನಡೆದ ಗೋಸಾಗಾಟ ಕೂಡ ಸಂಘಟನೆ ಧಾಳಿ ನಡೆಸಿ ಪೊಲೀಸರಿಗೆ ನೀಡಿದೆ. ಆದರೆ, ಈ ಪ್ರಕರಣದಲ್ಲಿ ಉತ್ತಮವಾಗಿ ಕೆಲಸ ಮಾಡಿದ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಪಡಿಸುವ ಹುನ್ನಾರ ನಡೆಸುತ್ತಿರುವದು ವಿಷಾದಕರ ಸಂಗತಿ ಎಂದರು.
ಸಿದ್ದಾಪುರ, ಕರಿಕೆ, ಹುಂಡಿ, ನೆಲ್ಯಹುದಿಕೇರಿ ಹಾಗೂ ವೀರಾಜಪೇಟೆ ಭಾಗಗಳಲ್ಲಿ ನಿರಂತರ ಗೋಮಾಂಸ ದಂಧೆ ನಡೆಯುತ್ತಿದೆ. ಮಾಕುಟ್ಟ, ಕರಿಕೆ, ಕುಟ್ಟ ಚೆಕ್ಪೋಸ್ಟ್ಗಳ ಮೂಲಕ ಸಾಗಾಟ ನಡೆಯುತ್ತಿದೆ. ಇದಕ್ಕೆಲ್ಲಾ ಎಸ್ಡಿಪಿಐ ಪ್ರಮುಖರುಗಳಾದ ಅಮೀನ್ ಮೋಹಿಸಿನ್ ಹಾಗೂ ಹಕೀಂ ಅವರುಗಳ ಕುಮ್ಮಕ್ಕು ಕಾರಣ ಎಂದು ಆರೋಪಿಸಿದರು.
ಭಜರಂಗ ದಳ ಸಹ ಸಂಚಾಲಕ ಪ್ರವೀಣ್ ಸಿದ್ದಾಪುರ ಮಾತನಾಡಿ, ನೆಲ್ಯಹುದಿಕೇರಿಯಲ್ಲಿ ನಡೆದ ಗೋಸಾಗಾಟ ಪ್ರಕರಣದಲ್ಲಿ ಸಂಘ ಪರಿವಾರದ ಕೈವಾಡವಿದೆ ಎಂದು ಆರೋಪಿಸಿರುವದು ಸತ್ಯಕ್ಕೆ ದೂರವಾಗಿದೆ. 9 ಗೋವುಗಳನ್ನು ಸಾಗಾಟ ಮಾಡುತ್ತಿದ್ದಾಗ ಸ್ಥಳಕ್ಕೆ ತೆರಳಿದ ಕಾರಣ ನಮ್ಮ ಮೇಲೆ ಕೊಲೆ ಬೆದರಿಕೆ ಹಾಕಲಾಗಿದೆ. ಕೊಡಗಿನಲ್ಲಿ ಕಾನೂನು ಮೀರಿ ಗೋವಧೆ ನಡೆಸಲು ಮುಂದಾಗಿರುವ ಮೊಹಿಸಿನ್ ಹಾಗೂ ಹಕೀಂ, ಇವರನ್ನು ಗಡೀಪಾರು ಮಾಡಬೇಕು. ಜಿಲ್ಲೆಯಲ್ಲಿ ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆ ಮೂಲಕ ಪ್ರಚೋಧನೆ ನೀಡುತ್ತಿರುವ ಇಂತಹ ಸಂಘಟನೆಗಳನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ತಪ್ಪಿದಲ್ಲಿ ಗೋಮಾಂಸ ಮಾರಾಟ ನಡೆಯುತ್ತಿರುವ ಜಿಲ್ಲೆಯ ಹೊಟೇಲ್ಗಳ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಗೋವಧೆಯನ್ನು ಸಂಪೂರ್ಣವಾಗಿ ತಡೆಯಲು ಗೋರಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದ್ದೇವೆ. ಆ ಮೂಲಕ ಗೋರಕ್ಷಣೆಗೆ ಮುಂದಾಗುವದಾಗಿ ತಿಳಿಸಿದರು. ಭಜರಂಗದಳ ಸಂಚಾಲಕ ವಿವೇಕ್ ರೈ, ಗೋರಕ್ಷಕ ಪ್ರಮುಖ ಪದ್ಮನಾಭನ್ ಹಾಗೂ ವಿಹೆಚ್ಪಿ ಪ್ರ. ಕಾರ್ಯದರ್ಶಿ ಕುಮಾರ್ ಗೋಷ್ಠಿಯಲ್ಲಿದ್ದರು.