ಶ್ರೀಮಂಗಲ, ಆ. 21: ಅಕ್ರಮವಾಗಿ ಗೋವುಗಳನ್ನು ನಾಲ್ಕೇರಿ ಗ್ರಾಮದ ಮೂಲಕ ಕೇರಳಕ್ಕೆ ಸಾಗಿಸುತ್ತಿರುವದನ್ನು ಪತ್ತೆಹಚ್ಚಿರುವ ಪೊಲೀಸರು 4 ಜಾನುವಾರು ಹಾಗೂ ಒಂದು ಜೀಪನ್ನು ವಶಕ್ಕೆ ಪಡೆದಿದ್ದಾರೆ.

ಭಾನುವಾರ ರಾತ್ರಿ ನಾಲ್ಕೇರಿ ಗ್ರಾಮದ ಮುಖ್ಯರಸ್ತೆಯಲ್ಲಿ ನಾಲ್ಕು ಜಾನುವಾರುಗಳನ್ನು ಸಾಗಿಸುತ್ತಿರುವದನ್ನು ಗಸ್ತಿನಲ್ಲಿದ್ದ ಕುಟ್ಟ ಪೊಲೀಸ್ ಉಪನಿರೀಕ್ಷಕರಿಗೆ ಪೊಲೀಸ್ ಬಾತ್ಮಿದಾರರು ಮಾಹಿತಿ ನೀಡಿದ ಸ್ಥಳಕ್ಕೆ ತೆರಳಿದಾಗ ಪೊಲೀಸರನ್ನು ಕಂಡು ಆರೋಪಿಗಳು ಕತ್ತಲಲ್ಲಿ ಜಾನುವಾರುಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಜಾನುವಾರುಗಳ ಜೊತೆಯಲ್ಲಿ ಬೆಂಗಾವಲಾಗಿ ಸಂಚರಿಸುತ್ತಿದ್ದ ಜೀಪನ್ನು (ಕೆ.ಎಲ್. 10 -ಎಲ್2836) ಸ್ಥಳದಲ್ಲೆ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಈ ಸಂಧರ್ಭ ಜೀಪನ್ನು ವಶಪಡಿಸಿಕೊಂಡು ತನಿಖೆ ನಡೆಸಿದಾಗ ಈ ಪ್ರಕರಣದಲ್ಲಿ ಕೇರಳ ರಾಜ್ಯದ ತೋಲ್ಪಟ್ಟಿಗೆ ಸೇರಿದ ಶರೀಫ್, ಸೆಲ್ವಂ ಹಾಗೂ ಸಲೀಂ ಅವರು ಭಾಗಿ ಯಾಗಿರುವದು ಗೊತ್ತಾಗಿದೆ. ಕುಟ್ಟ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಎ.ಎಸ್.ಐ. ಕುಮಾರ್ ಅವರು ರಾತ್ರಿ ಗಸ್ತಿನಲ್ಲಿದ್ದು, ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದರು.