ಶ್ರೀಮಂಗಲ, ಆ. 21: ದ.ಕೊಡಗಿನ ಅರುವತ್ತೋಕ್ಲು ಗ್ರಾಪಂ. ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳಾದ ಮನೆ, ವಿದ್ಯುಚ್ಚಕ್ತಿ, ಶೌಚಾಲಯ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಸಂಕಷ್ಟದಲ್ಲಿ ಬದುಕುತ್ತಿರುವ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಪಣಿಯರವರು, ಪಂಜರಿಯರವರು ಹಾಗೂ ಜೇನು ಕುರುಬ ಜನಾಂಗದ ಸುಮಾರು 110 ಕುಟುಂಬದ 600 ಮಂದಿ ಅಸಹನೀಯ ಬದುಕು ಸಾಗಿಸುತ್ತಿದ್ದಾರೆ. ಕಳೆದ 5 ವರ್ಷದಿಂದ ಹೋರಾಟ ನಡೆಸಿದರೂ ಜಿಲ್ಲಾಡಳಿತ ಸೂಕ್ತ ಸೌಲಭ್ಯ ಕಲ್ಪಿಸದೆ ನಿರ್ಲಕ್ಷ್ಯ ತಾಳಿರುವದನ್ನು ಖಂಡಿಸಿ ಹಾಗೂ ತಕ್ಷಣವೆ ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿ ತಾ.22 ರಂದು (ಇಂದು) ಪೊನ್ನಂಪೇಟೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಸ್ವಂತ ಸೂರು ಹಾಗೂ ಅದಕ್ಕೆ ಬೇಕಾದ ನಿವೇಶನ ಇಲ್ಲದೆ ಅತಂತ್ರರಾಗಿದ್ದ ಈ ಜನಾಂಗದ 110 ಕುಟುಂಬಕ್ಕೆ ಅರುವತ್ತೋಕ್ಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ ಅವರು, ತಾತ್ಕಾಲಿಕವಾಗಿ ಹಳ್ಳಿಗಟ್ಟು ಗ್ರಾಮದಲ್ಲಿ ಆಶ್ರಯ ಕಲ್ಪಿಸಿದ್ದರು. ಇದಲ್ಲದೆ ಕುಂದ ಗ್ರಾಮದಲ್ಲಿ ನಿವೇಶನವನ್ನು ಗುರುತಿಸಿ ಸಹಕಾರ ನೀಡಿದ್ದಾರೆ ಎಂದು ಜನಾಂಗದ ಪರವಾಗಿ ಪಣಿಯರವರ ಗಪ್ಪು, ನಂಜ, ಲೊಕೇಶ ಹೇಳುತ್ತಾರೆ. ಆದರೆ ಕುಂದ ಗ್ರಾಮದಲ್ಲಿ ಗುರುತಿಸಿದ ನಿವೇಶನದಲ್ಲಿ ಸರ್ವೆ ಮಾಡಿ ಹಕ್ಕುಪತ್ರ ನೀಡಲು ಜಿಲ್ಲಾಡಳಿತ ನಿರ್ಲಕ್ಷ್ಯ ತಾಳಿದೆ. ಶಾಶ್ವತವಾಗಿ ಮನೆ ನಿರ್ಮಿಸಲು ಸಹ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.

ಈ ಗ್ರಾಮದಲ್ಲಿ ನೆಲೆಸಿರುವ 110 ಕುಟುಂಬದಲ್ಲಿ 34 ಮಕ್ಕಳು ಶಾಲೆಗೆ ತೆರಳುತ್ತಿದ್ದು, ಅನೈರ್ಮಲ್ಯದಿಂದ ರೋಗ ಹರಡುವ ಭೀತಿ ತಲೆದೋರಿದೆ. ಗೋಣಿಕೊಪ್ಪ, ಪೊನ್ನಂಪೇಟೆ ಪಟ್ಟಣದ ಕಸ ವಿಲೇವಾರಿಯನ್ನು ಇವರು ವಾಸ ಮಡುತ್ತಿರುವ ಜಾಗದ ಸಮೀಪವೆ ಸುರಿಯುತ್ತಿದ್ದು, ಇದರ ವಾಸನೆ ಹಾಗೂ ಮಣ್ಣಿನಲ್ಲಿ ಬೆರೆತು ವಾತಾವರಣವನ್ನು ಕೆಡುತ್ತಿವೆ. ಇದರ ವಿರುದ್ದ ಹೋರಾಟ ನಡೆಸಲಾಯಿತು. ಈ ಸಂದರ್ಭ ಜಿಲ್ಲಾಡಳಿತ ಕಸ ವಿಲೇವಾರಿಗೆ ವೈಜ್ಞಾನಿಕ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆ ನೀಡಿ ಕಸ ವಿಂಗಡಣೆ ಮಾಡಿ ವಿಲೇವಾರಿ ಮಾಡುವ ಭರವಸೆ ನೀಡಿತು. ಆದರೆ ಇಲ್ಲಿ ಕೇವಲ ಶೆಡ್‍ಗಳನ್ನು ನಿರ್ಮಿಸಿ ಈ ವ್ಯವಸ್ಥೆ ನೆನೆಗುದಿಗೆ ಬಿದ್ದಿದೆ.

ಪ್ರಸ್ತುತ ಜೆ.ಸಿ.ಬಿ. ತಂದು ಗುಂಡಿ ತೋಡಿ ಕಸಗಳನ್ನು ಮುಚ್ಚುತ್ತಿದ್ದು, ಇದೇ ಗುಂಡಿಯಿಂದ ತ್ಯಾಜ್ಯ ಅಂತರ್ಜಲಕ್ಕೆ ಸೇರಿ ಕುಡಿಯುವ ನೀರನ್ನು ಕಲುಷಿತಗೊಳಿಸುತ್ತಿದೆ ಎಂಬವದನ್ನು ಇಲ್ಲಿನ ನಿವಾಸಿಗಳು ತೆರೆದಿಟ್ಟರು.

ಇಲ್ಲಿನ ನಿವಾಸಿಗಳು ಮಳೆಗೆ ಮನೆ ಸೋರುತ್ತಿರುವದರಿಂದ ತಮ್ಮ ತಾತ್ಕಾಲಿಕ ಮನೆಗಳಿಗೆ ಪಾಸ್ಟಿಕ್ ಶೀಟ್ ಹಾಕಿಕೊಂಡು ವಾಸಿಸುತ್ತಿದ್ದು, ಮನೆಯ ಸುತ್ತ ಮುತ್ತ ನೀರು ಹರಿಯುತ್ತಿದೆ. ಇದಲ್ಲದೆ ತಗ್ಗು ಪ್ರದೇಶ ಹಾಗೂ ತೇವಾಂಶವಿರುವ ಪ್ರದೇಶದಲ್ಲಿ ಇವರು ವಾಸಿಸುತ್ತಿರುವದರಿಂದ ಶೌಚಾಲಯದಲ್ಲಿ ಸಹ ನೀರು ತುಂಬಿಕೊಂಡು ಇದರ ಉಪಯೋಗ ಮಾಡಲು ಸಾಧ್ಯವಾಗದೆ ಸುತ್ತಮುತ್ತ ಕಾಡಿಗೆ ಶೌಚಾಲಯಕ್ಕೆ ತೆರಳಬೇಕಾಗಿ ರುವದು ಇವರ ದುರವಸ್ಥೆಯನ್ನು ತೋರಿಸುತ್ತಿದೆ. ಅಲ್ಲದೇ ಇಲ್ಲಿಗೆ ಸೂಕ್ತ ರಸ್ತೆ ವ್ಯವಸ್ಥೆಯು ಇಲ್ಲದೆ ಈ ನಿವಾಸಿಗಳು ಪರದಾಡುವಂತೆ ಆಗಿದೆ.

ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಸ್ವಾಮೀಜಿ ಬೋಧ ಸ್ವರೂಪನಂದ ಹಾಗೂ ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಎಂ.ಎನ್. ರವೀಂದ್ರ ಅವರು ಮುತುವರ್ಜಿ ವಹಿಸಿ, ಅರುವತ್ತೋಕ್ಲು ಪಂಚಾಯಿತಿಯಿಂದ ಒಂದು ಬಾವಿಯನ್ನು ನಿರ್ಮಿಸಿ ಕೊಟ್ಟಿದ್ದು, ಇದರೊಂದಿಗೆ ಆಶ್ರಮ ದಿಂದ ಮತ್ತೊಂದು ಬಾವಿಗೆ ರಿಂಗ್ ಅಳವಡಿಸಿದ್ದಾರೆ. ಅತ್ಯಂತ ದುಸ್ಥಿತಿಯಲ್ಲಿ ಬದುಕುತ್ತಿರುವ ಈ ನಿವಾಸಿಗಳ ಸಂಕಷ್ಟಕ್ಕೆ ಅರುವತ್ತೋಕ್ಲು ಗ್ರಾ.ಪಂ. ತನ್ನ ಇತಿಮಿತಿಯಲ್ಲಿ ಸೌಲಭ್ಯ ಕಲ್ಪಿಸಿದೆ. ಆದರೆ ಜಿಲ್ಲಾಡಳಿತ ಸ್ಪಂದಿಸದೆ ಇರುವದಕ್ಕೆ ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಎಂ.ಎಂ. ರವೀಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಲ್ಲಿಯೇ ಹುಟ್ಟಿ ಬೆಳೆದ ನಿವಾಸಿಗಳಿಗೆ ಇನ್ನೂ ಮೂಲಭೂತ ವ್ಯವಸ್ಥೆ ಕಲ್ಪಿಸದೆ ಇರುವದು ಅತ್ಯಂತ ದುರದೃಷ್ಟಕರ. ಜಿಲ್ಲಾಡಳಿತಕ್ಕೆ ಇದು ಕೊನೆಯ ಎಚ್ಚರಿಕೆಯಾಗಿದ್ದು, ಇದಕ್ಕೆ ಸ್ಪಂದಿಸದಿದ್ದರೆ ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಪಡೆದು ಹೋರಾಟ ನಡೆಸಲಾಗುವದು ಎಂದು ಹೇಳಿದ್ದಾರೆ. ತಾ. 22ರಿಂದ (ಇಂದಿನಿಂದ) ಪೊನ್ನಂಪೇಟೆ ಇ.ಒ. ಕಚೇರಿ ಎದುರು ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿರುವದಾಗಿ ಪ್ರಮುಖರಾದ ಗಪ್ಪು, ನಂಜ, ಲೊಕೇಶ್ ತಿಳಿಸಿದ್ದಾರೆ.

- ಅಣ್ಣೀರ ಹರೀಶ್ ಮಾದಪ್ಪ