ಮಡಿಕೇರಿ, ಆ. 21: ಬಡವರ ಭೂಮಿ ಮತ್ತು ವಸತಿ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕೆಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.ವೀರಾಜಪೇಟೆ ತಾಲೂಕು ಮಾಲ್ದಾರೆ ಪಂಚಾಯಿತಿ ಚನ್ನಂಗಿ ಗ್ರಾಮದ ಸ.ನಂ. 106/7ಎ ಪೈಸಾರಿ ಭೂಮಿಯಲ್ಲಿ ವಾಸವಿದ್ದ 577 ಆದಿವಾಸಿ ಕುಟುಂಬಗಳ ಸಂತ್ರಸ್ತರಿಗೂ ಶಾಶ್ವತ ಪುನರ್ವಸತಿ ಕಲ್ಪಿಸಬೇಕು. ನಾಗರಹೊಳೆ ಅಭಯಾರಣ್ಯ ವ್ಯಾಪ್ತಿ ಯಲ್ಲಿ ವಾಸಿಸುವ ಎಲ್ಲಾ ಅರಣ್ಯವಾಸಿ ಬುಡಕಟ್ಟು ಕುಟುಂಬಗಳಿಗೂ 2006ರ ಅರಣ್ಯ ಹಕ್ಕು ಕಾಯ್ದೆಯಡಿ ಸಾಮುದಾಯಿಕ ಮತ್ತು ವೈಯಕ್ತಿಕ ಎರಡೂ ರೀತಿಯ ಹಕ್ಕು ಪತ್ರ ಮತ್ತು ಆರ್‍ಟಿಸಿ ಕೊಡಬೇಕು. ಪ್ರೊ. ಮುಜಾಫರ್ ಅಸಾದಿ ಆಯೋಗದ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು.

ಕೊಡಗು ಜಿಲ್ಲೆಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಆದಿವಾಸಿಗಳ ಒಟ್ಟು ಸಮೀಕ್ಷೆಯೇ ನಡೆದಿಲ್ಲ. ಬಹುತೇಕ ಆದಿವಾಸಿಗಳು ಕಾಫಿ ತೋಟಗಳ ಲೈನ್‍ಮನೆಗಳಲ್ಲಿ ಜೀತಕ್ಕೆ ಸರಿ ಸಮನಾದ ಕೂಲಿಗಳಾಗಿ ಬದುಕುತ್ತಿದ್ದು, ಸಮಗ್ರ ಸಮೀಕ್ಷೆ ನಡೆಸಿ ಪ್ರಾಥಮಿಕ ಅಂಕಿ ಅಂಶ ಸಂಗ್ರಹಿಸಿ, ಎಲ್ಲರಿಗೂ ಬೇಸಾಯಕ್ಕೆ ಭೂಮಿ ಮತ್ತಿತರ ಪುನರ್ವಸತಿ ಸೌಲಭ್ಯಗಳನ್ನು ನೀಡಿ ಎಲ್ಲರನ್ನೂ ಲೈನ್‍ಮನೆಗಳಿಂದ ಬಿಡುಗಡೆಗೊಳಿಸಬೇಕು. ವೀರಾಜಪೇಟೆ ತಾಲೂಕು ಹಳ್ಳಿಗಟ್ಟಿನಲ್ಲಿ ಎರಡು ವರ್ಷದ ಹಿಂದೆ ಲೈನ್‍ಮನೆ ಗಳಿಂದ ಬಿಡಿಸಿಕೊಂಡು ಬಂದು ಗುಡಿಸಲು ಹಾಕಿಕೊಂಡಿದ್ದ 116 ಆದಿವಾಸಿ ಕುಟುಂಬಗಳಿಗೆ ಕಳೆದ ತಿಂಗಳು ನಿವೇಶನ ನೀಡಲಾಗಿದ್ದು, ಅದಕ್ಕೆ ಕೂಡಲೇ ಹಕ್ಕುಪತ್ರ, ಆರ್‍ಟಿಸಿ ನೀಡಿ ಎಲ್ಲಾ ಪೂರಕ ಸೌಕರ್ಯ ಗಳನ್ನು ಒದಗಿಸಬೇಕು.

ನಾತಂಗಾಲದಲ್ಲೂ 10 ವರ್ಷ ಗಳಿಂದ ಗುಡಿಸಲು ಕಟ್ಟಿಕೊಂಡಿರುವ 63 ಆದಿವಾಸಿ ಕುಟುಂಬಗಳಿಗೆ ನಿವೇಶನ ನೀಡಲು ಭೂಮಿ ಮಂಜೂ ರಾಗಿದ್ದರೂ ಅಧಿಕಾರಿಗಳು ನಿವೇಶನ ನೀಡುತ್ತಿಲ್ಲ.

(ಮೊದಲ ಪುಟದಿಂದ) ಅವರಲ್ಲಿ 33 ಕುಟುಂಬಗಳ ಹೆಸರನ್ನು ಮಾತ್ರ ಪಂಚಾಯಿತಿಯವರು ತಯಾರಿಸಿರುವ ಫಲಾನಿಭವಿಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. ಎಲ್ಲಾ ಗುಡಿಸಲುಗಳನ್ನು ನೆಲಸಮ ಮಾಡಿ, ಈ 33 ಕುಟುಂಬಗಳಿಗೆ ಮಾತ್ರ ತಲಾ ಕೇವಲ 2.5 ಸೆಂಟ್ಸ್ ಜಾಗ ಕೊಡುವದಾಗಿ ತಿಳಿಸಿದ್ದಾರೆ. ಎಲ್ಲಾ 63 ಕುಟುಂಬಗಳಿಗೂ ತಲಾ 10 ಸೆಂಟ್ ನಿವೇಶನ ನೀಡಬೇಕು. ಬಾಳೆಗುಂಡಿ ಗಿರಿಜನ ಹಾಡಿಯಲ್ಲಿ 100 ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ 300 ಎಕರೆ ಭೂಮಿಗೆ ಹಕ್ಕು ಪತ್ರ ನೀಡಲಾಗಿದೆ. ಆದರೆ ಅದು ಅರಣ್ಯ ಭೂಮಿ ಅಲ್ಲ. ಹಾಗಾಗಿ ಹಕ್ಕುಪತ್ರ ಅಸಿಂಧುವೆನ್ನಿಸಿ ಅವರನ್ನೆಲ್ಲ ಒಕ್ಕಲೆಬ್ಬಿಸುವ ಪರಿಸ್ಥಿತಿ ಎದುರಾಗಿದೆ. ಅವರಿಗೆ ಕಂದಾಯ ಕಾಯ್ದೆಯಡಿಯೇ ಹಕ್ಕುಪತ್ರ, ಆರ್‍ಟಿಸಿ ನೀಡಿ ಸಕ್ರಮಗೊಳಿಸಬೇಕು.

ಮಡಿಕೇರಿ ತಾಲೂಕು ಪಾಲೆಮಾಡು ಗ್ರಾಮದಲ್ಲಿ 260 ಕುಟುಂಬಗಳು 10 ವರ್ಷದಿಂದಲೂ ಮನೆ ಕಟ್ಟಿಕೊಂಡು, ತಾವೇ ಶಾಲೆ, ಅಂಗನವಾಡಿ ಸಹ ಮಾಡಿಕೊಂಡು ಹಕ್ಕುಪತ್ರ ಮತ್ತು ನಾಗರಿಕ ಸೌಲಭ್ಯಗಳಿಗಾಗಿ ಮನವಿ ಮಾಡುತ್ತಿದ್ದಾರೆ. ಅದನ್ನೆಲ್ಲ ಕೊಡದಿದ್ದರೂ 2009ರಲ್ಲಿ ಅವರ ಸ್ಮಶಾನಕ್ಕಾಗಿ ಪ.ಜಾತಿ ಮತ್ತು ಪ. ಬುಡಕಟ್ಟಿನವರಿಗೆ ತಲಾ ಎರಡು ಎಕರೆ ಜಾಗ ಮಂಜೂರಾಗಿತ್ತು. ಆದರೆ ನಂತರದ ಎಂಟು ವರ್ಷ ಕಚೇರಿಯಿಂದ ಕಚೇರಿಗೆ ಅಲೆದರೂ ಆ ಭೂಮಿಗೆ ಆರ್‍ಟಿಸಿ ಮಾಡಿಕೊಡದೆ, ಕಳೆದ ವರ್ಷ ಈ 4 ಎಕರೆಯನ್ನೂ ಸೇರಿಸಿ ಕ್ರಿಕೆಟ್ ಮೈದಾನಕ್ಕೆಂದು 10-12 ಎಕರೆ ಜಾಗ ಮಂಜೂರು ಮಾಡಿ ಆರ್‍ಟಿಸಿ ಸಹ ಮಾಡಿಕೊಡಲಾಗಿದೆ. ಕೂಡಲೇ ಈ ಕಾಲೋನಿಯ ಎಲ್ಲರಿಗೆ ಹಕ್ಕು ಪತ್ರ ಪಹಣಿ ಕೊಟ್ಟು, ಎಲ್ಲಾ ಸೌಲಭ್ಯ ಒದಗಿಸಿ, ಸ್ಮಶಾನದ ಸಮಸ್ಯೆಯನ್ನು ಸಹ ನ್ಯಾಯ ರೀತಿಯಲ್ಲಿ ಇತ್ಯರ್ಥ ಮಾಡಬೇಕು.

ಇದೇ ರೀತಿ ಮರಗೋಡು ಗ್ರಾಮ ಕತ್ತಲೆಕಾಡು ಸ.ನಂ. 1/11ರಲ್ಲಿ 2015ರಲ್ಲಿ ಮುಸ್ಲಿಮರ ಸ್ಮಶಾನಕ್ಕಾಗಿ 2 ಎಕರೆ ಮಂಜೂರು ಮಾಡಲಾಗಿತ್ತು. ಆದರೆ ಇನ್ನೂ ಆರ್‍ಟಿಸಿ ಕೊಟ್ಟಿಲ್ಲ. ಬೇರೆ ಕಡೆ ಇದ್ದ ಮುಸ್ಲಿಮರ ಸ್ಮಶಾನಕ್ಕೆ ಬದಲಿಯಾಗಿ ಈ ಜಾಗ ನೀಡಲಾಗಿತ್ತು. ಅದನ್ನು ಈಗಾಗಲೇ ಸ್ಮಶಾನವಾಗಿ ಬಳಕೆ ಕೂಡ ಮಾಡುತ್ತಿದ್ದಾರೆ. ಅದಕ್ಕೆ ಆರ್‍ಟಿಸಿ ಕೊಟ್ಟು ಅದನ್ನು ಖಾಯಂಗೊಳಿಸ ಬೇಕು. ಮಡಿಕೇರಿ ತಾಲೂಕು ಬೇತು ಗ್ರಾಮದ ಸ.ನಂ. 1/5ರಲ್ಲಿ ಚೆರಿಯಪರಂಬುವಿನ 26 ಎಕರೆ ಪೈಸಾರಿ ಭೂಮಿಯಲ್ಲಿ ಸುಮಾರು 200 ಕುಟುಂಬಗಳು 10 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿದ್ದು, ಹಕ್ಕುಪತ್ರಕ್ಕಾಗಿ ಮನವಿ ಸಲ್ಲಿಸುತ್ತಲೇ ಇದ್ದಾರೆ. ಅವರಿಗೆ ಕೂಡಲೇ ಹಕ್ಕುಪತ್ರ ಮತ್ತಿತರ ಎಲ್ಲಾ ಸೌಲಭ್ಯಗಳನ್ನು ನೀಡಬೇಕಿದೆ. ಮಡಿಕೇರಿಗೆ ಸಮೀಪದ ಗದ್ದಿಗೆಯಲ್ಲಿ ಇಪ್ಪತ್ತು ವರ್ಷಗಳಿಂದಲೂ ವಾಸವಿದ್ದವರನ್ನು 2014-15ರಲ್ಲಿ ನಗರಸಭೆ ಅಧಿಕಾರಿಗಳು ಒಕ್ಕಲೆಬ್ಬಿಸಿದ್ದಾರೆ. ಅವರೆಲ್ಲರಿಗೆ ಕೂಡಲೇ ಮನೆ, ನಿವೇಶನ ಕೊಡಬೇಕೆಂದು ಆಗ್ರಹಿಸುತ್ತೇವೆ.

ಸೋಮವಾರಪೇಟೆ ತಾಲೂಕು ಬಸವನಹಳ್ಳಿ ಗ್ರಾಮದ ಸ.ನಂ. 1/1 ರಲ್ಲಿ ಬಡವರಿಗೆ ನಿವೇಶನ ಮಂಜೂರು ಮಾಡಲು 3 ಎಕರೆ ಜಾಗ ಈ.ಓ. ಹೆಸರಿಗೆ ಮಂಜೂರಾಗಿದೆ. ಕೆಲವೇ ಮಂದಿಗೆ ಹಕ್ಕು ಪತ್ರ ವಿತರಿಸಲಾಗಿದ್ದು, ಬಾಕಿ ಇರುವ ಸುಮಾರು 50 ಕುಟುಂಬಗಳಿಗೆ ಕೂಡಲೇ ಮಂಜೂರು ಮಾಡಿ ಹಕ್ಕು ಪತ್ರ, ಆರ್‍ಟಿಸಿ ನೀಡಬೇಕು. ಕುಶಾಲನಗರ ಗುಂಡೂರಾವ್ ಬಡಾವಣೆಯಲ್ಲಿ 30 ವರ್ಷದಿಂದ ವಾಸವಿರುವ 30 ಅಲೆಮಾರಿ ಕುಟುಂಬಗಳಿಗೆ ಕಾದಿಟ್ಟ ಮುಳ್ಳುಸೋಗೆ ಪಂಚಾಯಿತಿ ಸ.ನಂ. 5/1ರ 1 ಎಕರೆ ಜಾಗದಲ್ಲಿ ಅವರಿಗೆ ನಿವೇಶನ ಮಂಜೂರು ಮಾಡಿ ಹಕ್ಕು ಪತ್ರ, ಆರ್‍ಟಿಸಿ ನೀಡಬೇಕು. ಕುಶಾಲನಗರದ 3ನೇ ವಾರ್ಡ್‍ನಲ್ಲಿ 25 ವರ್ಷದಿಂದ ಸರ್ಕಾರಿ ಪೈಸಾರಿಯಲ್ಲಿ ಮನೆ ಕಟ್ಟಿಕೊಂಡಿರುವ 25 ಕುಟುಂಬಗಳಿಗೆ ಕೂಡಲೇ ಹಕ್ಕುಪತ್ರ ಕೊಟ್ಟು, ಅವರನ್ನು ತೆರವುಗೊಳಿಸುವ ಪ್ರಯತ್ನವನ್ನು ಕೈಬಿಡಬೇಕು.

ಗೊಂದಿಬಸವನಹಳ್ಳಿ ಗ್ರಾಮ ಮಾದಾಪಟ್ಟಣದಲ್ಲಿ 500 ಕುಟುಂಬಗಳು ತಲಾ 2-3 ಎಕರೆ ಕೃಷಿ ಮಾಡುತ್ತಿವೆ. ಆದರೆ ಹಕ್ಕು ಪತ್ರ ಕೊಟ್ಟಿಲ್ಲ. ಅವರನ್ನು ಒಕ್ಕಲೆಬ್ಬಿಸಲು ಸರ್ಕಾರದಿಂದ ಒತ್ತಡ ಹೇರಲಾಗುತ್ತಿದೆ. ಕೂಡಲೇ ಮಂಜೂರು ಮಾಡಿ ಹಕ್ಕು ಪತ್ರ, ಆರ್‍ಟಿಸಿ ನೀಡಬೇಕು. ವೀರಾಜಪೇಟೆ ತಾಲೂಕು ಆರ್‍ಜಿ ತೆರ್ಮೆಕಾಡು ಪೈಸಾರಿಯಲ್ಲಿ 40 ವರ್ಷಗಳಿಂದ ವಾಸಿಸುತ್ತಿರುವ ಸುಮಾರು 100 ಕುಟುಂಬಗಳಿಗೆ ಕೂಡಲೇ ಹಕ್ಕು ಪತ್ರ, ಆರ್‍ಟಿಸಿ ನೀಡಬೇಕೆಂದು ಮನವಿ ಮಾಡುತ್ತೇವೆ ಎಂಬಿತ್ಯಾದಿ ಮನವಿಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ನಿರ್ವಾಣಪ್ಪ, ಸದಸ್ಯ ಅಮಿನ್ ಮೊಯ್ಸಿನ್, ವಿವಿಧ ಸಂಘಟನೆಗಳ ಪ್ರಮುಖರಾದ ಸ್ವಾಮಿಯಪ್ಪ, ಅನಿತಾ, ಮೊಣ್ಣಪ್ಪ ಷರೀಫ್, ಗಣೇಶ್, ಅಪ್ಪು, ರಾಜು, ಸಣ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.