ಕುಶಾಲನಗರ, ಆ. 21: ಬಿಜೆಪಿ ಎಸ್‍ಟಿ ಮೋರ್ಚಾದ ಸೋಮವಾರ ಪೇಟೆ ತಾಲೂಕು ಮಟ್ಟದ ಕಾರ್ಯ ಕಾರಿಣಿ ಸಭೆ ಕುಶಾಲನಗರದಲ್ಲಿ ನಡೆಯಿತು.
ಎಸ್‍ಟಿ ಮೋರ್ಚಾ ತಾಲೂಕು ಘಟಕ ಅಧ್ಯಕ್ಷ ಪ್ರಭಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಉದ್ಘಾಟಿಸಿದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯದ ಎಲ್ಲೆಡೆ ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳಿಗೆ ಕಾಂಕ್ರಿಟ್ ರಸ್ತೆ ನಿರ್ಮಿಸಿದ ಕೀರ್ತಿ ಬಿಜೆಪಿ ಸರಕಾರದ್ದಾಗಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಕಲ್ಪಿಸಲಾಗಿತ್ತು. ಆದರೆ ಇಂದಿನ ಕಾಂಗ್ರೆಸ್ ಸರಕಾರ ಘೋಷಿಸಿದ ಅನುದಾನದಲ್ಲಿ ಅರ್ಧದಷ್ಟನ್ನು ಕೂಡ ಪೂರ್ಣವಾಗಿ ಬಿಡುಗಡೆಗೊಳಿಸದೆ ಜಿಲ್ಲೆಯನ್ನು ಬಹುತೇಕ ಕಡೆಗಣಿಸಿದೆ ಎಂದು ಆರೋಪಿಸಿದರು.
ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಾತನಾಡಿ, ಬಿಜೆಪಿ ಪಕ್ಷ ತತ್ವ ಸಿದ್ದಾಂತಗಳು, ಯೋಜನೆ ಗಳು ಜನರ ಮನೆಮಾತಾಗಿದೆ. ಈ ಹಿಂದಿನ ಯುಪಿಎ ಸರಕಾರದ ಭ್ರಷ್ಟಾಚಾರದಿಂದ ಬೇಸತ್ತಿದ್ದ ಜನತೆಗೆ ಮೋದಿ ಸರಕಾರ ಹೊಸ ಆಶಾಭಾವನೆ ಮೂಡಿಸಿದೆ. ಬಿಜೆಪಿಯ ಜನಪರ ಕಾರ್ಯಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲೂ ಕೂಡ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು. ಎಸ್‍ಟಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ. ಮೋಹನ್ ಪ್ರಾಸ್ತಾವಿಕ ನುಡಿಗಳಾಡಿ, ವಿವಿಧ ಘಟಕಗಳನ್ನು ರಚಿಸುವ ಮೂಲಕ ಬಿಜೆಪಿ ಪ್ರತಿ ವರ್ಗದವರಿಗೆ ಸಮಾನ ಅವಕಾಶ ಕಲ್ಪಿಸುತ್ತಿದೆ. ಈ ಮೂಲಕ ಪ್ರತಿಯೊಬ್ಬರಿಗೂ ಸೌಲಭ್ಯಗಳನ್ನು ತಲುಪಿಸುವಲ್ಲಿ ಪಕ್ಷ ಕಾಳಜಿ ವಹಿಸಿದೆ ಎಂದರು.
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಉಪಾಧ್ಯಕ್ಷ ಗಣಿಪ್ರಸಾದ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ತಾಲೂಕು ಪಂಚಾಯ್ತಿ ಸದಸ್ಯರಾದ ಪುಷ್ಪಾ, ಗಣೇಶ್, ಕ್ಷೇತ್ರಾಧ್ಯಕ್ಷರಾದ ಎಂ.ಎನ್. ಕುಮಾರಪ್ಪ, ಎಸ್‍ಟಿ ಮೋರ್ಚಾ ಜಿಲ್ಲಾ ಕೋಶಾಧಿಕಾರಿ ಪ್ರಕಾಶ್, ಮುಳ್ಳುಸೋಗೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಭವ್ಯ, ಪ್ರಮುಖರಾದ ಕೆ.ಕೆ. ಭೋಗಪ್ಪ ಮತ್ತಿತರರು ಇದ್ದರು.
ಕೂಡಿಗೆ ಶಕ್ತಿ ಕೇಂದ್ರದ ಕಾರ್ಯದರ್ಶಿ ಮಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಭೆಗೂ ಮುನ್ನ ಸ್ವಾತಂತ್ರ್ಯ ಹೋರಾಟ ಗಾರರಾದ ಬಿರ್ಸ ಮುಂಡ ಮತ್ತು ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಎಸ್‍ಟಿ ಸಮಾಜದಿಂದ ಜಿಲ್ಲಾ ಪಂಚಾಯ್ತಿ, ತಾ.ಪಂ. ಮತ್ತು ಗ್ರಾಮ ಪಂಚಾಯ್ತಿಗೆ ಆಯ್ಕೆಯಾದ ಜನಪ್ರತಿನಿಧಿಗಳನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.