*ಗೋಣಿಕೊಪ್ಪಲು, ಆ. 21: ಪ್ರಜಾಪ್ರಭುತ್ವದ ಮೊದಲ ಮೆಟ್ಟಿಲು ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿ ಸಂಘ ಎಂದು ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಳೀಯ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಚೆಪ್ಪುಡೀರ ರಾಮಕೃಷ್ಣ ಹೇಳಿದರು.
ತಿತಿಮತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಸಂಘ ಪ್ರಜಾಪ್ರತಿನಿಧಿ ಸಭೆಯ ಮೊದಲ ಸಂಸತ್ತು. ಚುನಾವಣಾ ವಿಧಾನ ಮತ್ತು ಪ್ರಜಾಪ್ರತಿನಿಧಿಗಳ ಜವಾಬ್ದಾರಿ ಬಗ್ಗೆ ಅರಿತುಕೊಳ್ಳಲು ವಿದ್ಯಾರ್ಥಿ ಸಂಘ ನೆರವಾಗಲಿದೆ. ಜತೆಗೆ ಭವಿಷ್ಯದ ನಾಯಕರನ್ನು ಸೃಷ್ಟಿಸಲಿದೆ ಎಂದು ಅಭಿಪ್ರಾಯಿಸಿದರು.
ಪ್ರಾಂಶುಪಾಲ ಬಿ. ರಾಜಣ್ಣ ಮಾತನಾಡಿ, ವಿದ್ಯಾರ್ಥಿ ಸಂಘ ಶೈಕ್ಷಣಿಕ ಅವಧಿ ಮುಗಿಯುವ ವರೆಗೂ ಕ್ರಿಯಾಶೀಲವಾಗಿರಬೇಕು. ಪಠ್ಯದ ಜತೆಗೆ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳನ್ನೂ ವ್ಯವಸ್ಥಿತವಾಗಿ ನಡೆಸಬೇಕು. ಇದರಿಂದ ವಿದ್ಯಾರ್ಥಿಗಳ ಪ್ರತಿಭಾ ಪ್ರಕಾಶನಕ್ಕೆ ಅವಕಾಶ ಲಭಿಸಿದಂತಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ಕೆ.ಎಂ. ದರ್ಶನ್, ಕೆ.ಎಸ್. ಮುತಾಲಿ, ಪಿ.ಕೆ. ದಮಯಂತಿ, ಶಭಾನಯಾಸ್ಮಿ, ಪಿ.ಸಿ. ಮಣಿಕಂಠ, ವೈ.ಎಸ್. ಸಂಗೀತಾ, ವೈ.ಎಂ. ಭಾಗ್ಯ, ಪಿ.ಸಿ. ಚಾಂದಿನಿ, ಟಿ.ಕೆ. ಅನೀಶ್, ವೆರೋನಿಕ ಡಿಸೋಜ ಅವರಿಗೆ ಮುಖ್ಯೋಪಾಧ್ಯಾಯ ದಿನೇಶ್ ಪ್ರಮಾಣವಚನ ಬೋಧಿಸಿದರು.
ಉಪನ್ಯಾಸಕರಾದ ಎನ್.ಕೆ. ಶಂಭು, ಡಾ. ಜೆ. ಸೋಮಣ್ಣ ಹಾಜರಿದ್ದರು. ವರದರಾಜ್ ನಿರ್ವಹಿಸಿದರು.