ಗೋಣಿಕೊಪ್ಪಲು, ಆ. 21: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವತಿಯಿಂದ ವಿಶ್ವ ಜೈವಿಕ ಇಂಧನ ದಿನಾಚರಣೆಯನ್ನು ವಿದ್ಯಾರ್ಥಿಗಳಿಗೆ ಜೈವಿಕ ಇಂಧನ ನೀಡುವ ಗಿಡಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು.

ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 400 ವಿದ್ಯಾರ್ಥಿಗಳಿಗೆ ಜೈವಿಕ ಇಂಧನದ ಸಸ್ಯಗಳಾದ, ಬೇವು, ಹೊಂಗೆ, ಸುರಹೊನ್ನೆ ಹಾಗೂ ಸಿಮರೊಬ ಸಸ್ಯ ಜಾತಿಗಳ ಗಿಡ ವಿತರಣೆ ಮಾಡಲಾಯಿತು. ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನೈಸರ್ಗಿಕ ಸಂಪತ್ತು ವಿಭಾಗದ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಅವಶ್ಯವಾಗಿದೆ. ಜೈವಿಕ ಇಂಧನದ ಸಸ್ಯಗಳಾದ, ಬೇವು, ಹೊಂಗೆ, ಸುರಹೊನ್ನೆ ಹಾಗೂ ಸಿಮರೊಬ ಸಸ್ಯ ಜಾತಿಗಳ ಬೀಜದಿಂದ ನಾವು ಜೈವಿಕ ಇಂಧನವನ್ನು ತಯಾರಿಸ ಬಹುದಾಗಿದೆ. ಇದರ ಉಪಯೋಗ ದಿಂದ ಪರಿಸರ ನೈರ್ಮಲ್ಯವನ್ನು ಕಡಿಮೆಗೊಳಿಸಬಹುದಾಗಿದೆ. ಕೃಷಿಕರಿಗೆ ಆರ್ಥಿಕವಾಗಿ ಸಬಲ ರಾಗಲು ಕೂಡ ನೈಸರ್ಗಿಕ ಇಂಧನ ನೀಡುವ ಸಸ್ಯಗಳ ಕೃಷಿ ಅವಶ್ಯಕ ಎಂದರು. ಅರಣ್ಯ ಮಹಾ ವಿದ್ಯಾಲಯದ ಪ್ರಾದ್ಯಾಪಕ ಮಹೇಶ್ವರಪ್ಪ ಬೀಜದ ಉಪಚಾರ ಮತ್ತು ಮಣ್ಣಿನ ಹುಂಡೆ ಬೀಜವನ್ನು ತಯಾರಿಸುವಿಕೆ ಬಗ್ಗೆ ಪ್ರಾಯೋಗಿಕ ವಾಗಿ ತಿಳಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಟಿ.ಎಸ್ ಗಣೇಶ್ ಪ್ರಸಾದ್ ಮಾತನಾಡಿ, ವಿಧ್ಯಾರ್ಥಿ ಜೀವನದಲ್ಲಿ ಜೈವಿಕ ಇಂಧನದ ಮಹತ್ವ ಅರಿಯಬೇಕು ಎಂದರು. ಉಪ ಪ್ರಾಂಶುಪಾಲ ಚಂದನ ಉದ್ಘಾಟಿಸಿದರು. ಬೋಜಮ್ಮ ವಂದಿಸಿದರು.