ಮಡಿಕೇರಿ, ಆ. 21: ಮಡಿಕೇರಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಕಳೆದ ಒಂದು ತಿಂಗಳ ಹಿಂದೆ ಸುಮಾರು 40 ಮಂದಿ ವಿದ್ಯಾರ್ಥಿನಿಯರಿಗೆ ಕೆಲಸ ಕೊಡಿಸುವದಾಗಿ ಬೆಂಗಳೂರಿನ ವ್ಯಕ್ತಿಯೊಬ್ಬ ಹಣ ವಂಚಿಸಿದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ. ಪ್ರಮುಖ ಆರೋಪಿ ಬೆಂಗಳೂರಿನ ಮಧ್ಯವರ್ತಿ ಗಣೇಶ್ ಶೆಟ್ಟಿ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ನಡುವೆ ಪ್ರಕರಣದಲ್ಲಿ ಕೈ ಜೋಡಿಸಿರುವದಾಗಿ ಪೊಲೀಸರ ಪ್ರಥಮ ವರ್ತಮಾನದಲ್ಲಿ ಕೇಳಿ ಬಂದಿರುವ ಇನ್ನಿತರ ಇಬ್ಬರು ಆರೋಪಿಗಳಾದ ಕಾಲೇಜು ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಹಾಗೂ ಕನ್ನಡ ಉಪನ್ಯಾಸಕ ಕುಮಾರಸ್ವಾಮಿ ಇವರುಗಳನ್ನು ಇಂದಿನಿಂದ ಕಡ್ಡಾಯ ರಜೆಯಲ್ಲಿ ಕಳುಹಿಸಲು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಆದೇಶಿಸಿದೆ.
ತಾ. 18 ರಂದು ಸಿಂಡಿಕೇಟ್ ಸಭೆಯ ಉಪಕುಲಪತಿ ಕೆ. ಬೈರಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ನಡೆದ ವಿವಿ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು. ಕಾಲೇಜಿನ ಹಂಗಾಮಿ ಪ್ರಾಂಶುಪಾಲರಾಗಿ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಪ್ರೊ. ಟಿ.ಡಿ. ತಿಮ್ಮಯ್ಯ ಅವರನ್ನು ನೇಮಕ ಮಾಡಲಾಯಿತು. ಅಲ್ಲದೆ ಕಾಲೇಜಿನ ವತಿಯಿಂದಲೂ ಪ್ರಕರಣದ ಕೂಲಂಕಶ ತನಿಖೆ ನಡೆಸಲು ನಾಲ್ಕು ಮಂದಿಯ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಸಿಂಡಿಕೇಟ್ನ ಸರ್ಕಾರಿ ಪ್ರತಿನಿಧಿ ಡಾ. ಪುಷ್ಟಾ ಕುಟ್ಟಣ್ಣ, ವಿದ್ಯಾರ್ಥಿಗಳ ಕಲ್ಯಾಣ ಸಮಿತಿ ನಿರ್ದೇಶಕ ಪ್ರೊ. ಉದಯ, ಮಹಿಳಾ ಹಾಸ್ಟೆಲ್ ವಾರ್ಡನ್ ಪ್ರೊ. ಶಶಿರೇಖಾ ಮತ್ತು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಶಿವರಾಮಶೆಟ್ಟಿ ಇವರುಗಳನ್ನು ನೇಮಿಸಲಾಯಿತು.
ಈ ಸಮಿತಿ ತನಿಖೆ ನಡೆಸಿ ವಿವಿಗೆ ವರದಿ ಒಪ್ಪಿಸುವಂತೆ ಸೂಚಿಸಲಾಯಿತು. ಇಷ್ಟೇ ಅಲ್ಲದೆ ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ವಿ.ವಿ. ಯಿಂದಲೇ ನ್ಯಾಯಾಂಗ ತನಿಖೆ ನಡೆಸುವಂತೆಯೂ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವದಾಗಿ ವಿ.ವಿ. ರಿಜಿಸ್ಟ್ರಾರ್ ಡಾ. ಕೋಡಿರ ಲೋಕೇಶ್ ಮಾಹಿತಿಯಿತ್ತರು.
ಪೊಲೀಸ್ ತನಿಖೆ
ಈ ನಡುವೆ ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್ ಎಂ. ಮಹೇಶ್ ಅವರ ಪ್ರಕಾರ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಮುಖ್ಯ ಆರೋಪಿ ಗಣೇಶ್ ಶೆಟ್ಟಿ ಹಾಗೂ ಇತರ ಆರೋಪಿಗಳಾದ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಹಾಗೂ ಉಪನ್ಯಾಸಕ ಕುಮಾರಸ್ವಾಮಿ ವಿರುದ್ಧವೂ ಮೊಕದ್ದಮೆ ದಾಖಲಾಗಿದೆ. ಗಣೇಶ್ ಶೆಟ್ಟಿ ಈಗ ನ್ಯಾಯಾಂಗ ಬಂಧನದಲ್ಲಿದ್ದು, ಆತನಿಗೆ ಜಾಮೀನು ದೊರೆತಿಲ್ಲ. ಇನ್ನೆರಡು ಮೂರು ದಿನಗಳಲ್ಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆಯಲಾಗುವದು. ಆತನ ವಿಚಾರಣೆ ಬಳಿಕ ಪ್ರಾಂಶುಪಾಲೆ ಮತ್ತು ಉಪನ್ಯಾಸಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವದು ಎಂದು ತಿಳಿಸಿದರು.
ಪ್ರಾರಂಭಿಕ ತನಿಖೆ ಅನ್ವಯ ಗಣೇಶ್ ಶೆಟ್ಟಿ ಬೆಂಗಳೂರಿನ ಅಕ್ಸೆಂಚರ್ ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡು ಬಂದು ಸುಮಾರು 40 ಮಂದಿ ವಿದ್ಯಾರ್ಥಿನಿಯರನ್ನು ಸಂದರ್ಶನ ನಡೆಸಿದ ನಾಟಕವಾಡಿದ ಬಳಿಕ ನಕಲಿ ನೇಮಕಾತಿ ಪತ್ರವನ್ನು ಸೃಷ್ಟಿಸಿ ಅವರುಗಳಿಗೆ ವಸತಿ ಸೌಕರ್ಯಕ್ಕೆಂದು ಸಾವಿರಾರು ಹಣ ಪಡೆದ. ಬೆಂಗಳೂರಿನ ಮಾರತಹಳ್ಳಿಯಲ್ಲಿ ಈತ ಕಲ್ಪಿಸಿದ ವಸತಿ ಗೃಹಕ್ಕೆ ಕೆಲವು ಮಂದಿ ಯುವತಿಯರು ತೆರಳಿ ಹುದ್ದೆಗಾಗಿ ಅನೇಕ ದಿನ ಕಾದು ಕುಳಿತರು.
(ಮೊದಲ ಪುಟದಿಂದ) ಆತ ಒಂದಲ್ಲ ಒಂದು ನೆಪ ಹೇಳಿಕೊಂಡು ಹುದ್ದೆ ಕೊಡಿಸದೆ ಜಾರಿಕೊಳ್ಳುತ್ತಿದ್ದ. ಆ ಬಳಿಕವೇ ಯುವತಿಯರಿಗೆ ಈತ ವಂಚಿಸಿದ ಕುರಿತು ಖಾತರಿಯಾಯಿತು. ಈ ನಡುವೆ ಜುಲೈ 25 ರಂದು ತಾನು ಕೆಲಸ ಕೊಡಿಸುವದಾಗಿಯೂ ಯುವತಿಯರಿಗೆ ಹುದ್ದೆ ಕೊಡಿಸುವ ಮುನ್ನ ದೈಹಿಕ ಪರೀಕ್ಷೆಗೆ ಒಳಪಡಿಸಬೇಕಾಗಿರುವದಾಗಿಯೂ ಮತ್ತೊಂದು ಕೈ ಚಳಕ ತೋರಿಸಿದ. ಇದರಿಂದ ಭಯಗೊಂಡ ಯುವತಿಯರು ತಮ್ಮ ಪೋಷಕರಿಗೆ ತುರ್ತು ವಿಷಯ ಮುಟ್ಟಿಸಿದ್ದು, ಪೋಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರನ್ನು ಭೇಟಿ ಮಾಡಿ ತಮ್ಮ ಮಕ್ಕಳಿಗೆ ರಕ್ಷಣೆ ಕೋರಿದರು. ಎಸ್ಪಿಯವರು ತಕ್ಷಣವೇ ಅಪರಾಧ ಪತ್ತೆದಳದ ಅಧಿಕಾರಿಗಳು ಬೆಂಗಳೂರಿಗೆ ತೆರಳಿ ಯುವತಿಯರನ್ನು ರಕ್ಷಿಸುವಂತೆ ನಿರ್ದೇಶಿಸಿದರು. ಮಾರತಹಳ್ಳಿ ಪೊಲೀಸರ ಸಹಕಾರದೊಂದಿಗೆ ಕೊಡಗು ಪೊಲೀಸರು ಆರೋಪಿ ಗಣೇಶನನ್ನು ಬಂಧಿಸಿ ಮಡಿಕೇರಿಗೆ ಕರೆತರಲು ಯಶಸ್ವಿಯಾದರು. ತನಿಖೆ ಬಳಿಕ ಪ್ರಕರಣದ ಸತ್ಯಾಂಶ ಹೊರಬರಲಿದೆ.