ವೀರಾಜಪೇಟೆ ತಾ.ಪಂ. ಕಾರ್ಯನಿರ್ವಹಣಧಿಕಾರಿ ಕಿರಣ್ ಪೆಡ್ನೇಕರ್ ಅವರು, ಲಿಖಿತ ಭರವಸೆ ನೀಡಿದ ನಂತರ ನಿವೇಶನಕ್ಕಾಗಿ ಆಗ್ರಹಿಸಿ ಇ.ಒ ಕಚೇರಿ ಮುಂದೆ ಹಳ್ಳಿಗಟ್ಟು ಗ್ರಾಮದಲ್ಲಿ ತಾತ್ಕಾಲಿಕವಾಗಿ ನೆಲೆನಿಂತಿರುವ ಪರಿಶಿಷ್ಟ ಪಂಗಡದ ನಿವಾಸಿಗಳು ತಮ್ಮ ಅಹೋರಾತ್ರಿ ಧರಣಿಯನ್ನು ಸಂಜೆಯ ವೇಳೆಗೆ ವಾಪಸ್ ಪಡೆದರು.ಸ್ಥಳಕ್ಕೆ ಆಗಮಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಇ.ಒ ಅವರಿಗೆ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದರು. ಇದೇ ಸಂಧರ್ಭ ಮಂಗಳೂರಿನ ಕೇಡ್ ಸರ್ವೆ ಸಂಸ್ಥೆಯ ಅಧಿಕಾರಿಗಳು ಆಗಮಿಸಿ ಮುಂದಿನ ಒಂದು ತಿಂಗಳೊಳಗೆ 30-40ರ ಅಳತೆಯ ನಿವೇಶನವನ್ನು ಈಗಾಗಲೆ ಸರಕಾರ ಹಾತೂರು ಗ್ರಾ.ಪಂ. ವ್ಯಾಪ್ತಿಯ ಕುಂದ ಗ್ರಾಮದಲ್ಲಿ ಗುರುತಿಸಿರುವ 6 ಎಕರೆಯಲ್ಲಿ ಸರ್ವೆ ಮಾಡಿ ನೀಡಲು ಒಪ್ಪಿಕೊಂಡಿದೆ. ಇದಲ್ಲದೆ ಇದೇ ಸ್ಥಳದಲ್ಲಿ ಮುಂದಿನ 15 ದಿನದೊಳಗೆ ರಸ್ತೆ, ಮೋರಿ ಇತ್ಯಾದಿ ಕಾಮಗಾರಿಯನ್ನು ಮಾಡಿ ಅಭಿವೃದ್ದಿ ಪಡಿಸಲಾಗುತ್ತದೆ. ನಿವೇಶನಗಳನ್ನು ಈಗಾಗಲೆ ಗುರುತಿಸಲಾಗಿದ್ದು, 5 ದಿವಸದ ಒಳಗೆ ಎಲ್ಲವನ್ನು ಅಭಿವೃದ್ದಿಪಡಿಸಿ ಫಲಾನುಭವಿಗಳ ಸ್ವಾಧೀನಕ್ಕೆ ಕೊಡಲಾಗುವದು ಎಂಬ ಭರವಸೆಯನ್ನು ಇ.ಒ ನೀಡಿದ್ದಾರೆ.

ಬೆಳಗ್ಗಿನಿಂದಲೆ ಪ್ರತಿಭಟನೆಯ ಮುಂಚೂಣಿಯಲ್ಲಿರುವ ಈ ಬಾರಿ ವೀರಾಜಪೇಟೆ ಕ್ಷೇತ್ರದಿಂದ ಬಿ.ಜೆ.ಪಿ. ಟಿಕೆಟ್ ಪ್ರಬಲ ಆಕಾಂಕ್ಷಿ, ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ ಅವರು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭವೇ ಶಾಸಕ ಕೆ.ಜಿ. ಬೋಪಯ್ಯ ಅವರು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭ ಉಭಯರು ಪರಸ್ಪರ ಮಾತನಾಡ ಲಿಲ್ಲ. ರವೀಂದ್ರ ಅವರು ಪ್ರತಿಭಟನೆ ಯಲ್ಲಿ ಕುಳಿತಿದ್ದವರು ಶಾಸಕರು ಬಂದಾಗ ಎದ್ದೇಳಲಿಲ್ಲ. ಈ ಸಂದರ್ಭ ಪ್ರತಿಭಟನಾಕಾರರು ರವೀಂದ್ರ ಪರ ಘೋಷಣೆ ಕೂಗಿದ್ದು, ಶಾಸಕರೊಂದಿಗೆ ಆಗಮಿಸಿದವರಿಗೆ ಮುಜುಗರ ತಂದೊಡ್ಡಿದ ಘಟನೆ ನಡೆಯಿತು. ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್, ಅರುವತ್ತೋಕ್ಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ ಸೋಮಯ್ಯ ಹಾಗೂ ಇತರರು ಹಾಜರಿದ್ದರು. ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಸಂದರ್ಭ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ, ಇಓ ಕಿರಣ್ ಪಡ್ನೆಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಹಳ್ಳಿಗಟ್ಟುವಿನಲ್ಲಿ ವಾಸಿಸುತ್ತಿರುವ ಕಾಲೋನಿ ನಿವಾಸಿಗಳನ್ನು ನೀವು ಮನುಷ್ಯರೆಂದು ಭಾವಿಸಿದ್ದೀರಾ?. ಅಲ್ಲ, ಕಾಡು ಪ್ರಾಣಿಗಳೆಂದು ಭಾವಿಸಿದ್ದೀರಾ? ಎಂದು ವಾಗ್ದಾಳಿ ನಡೆಸಿ, ಕೂಡಲೇ ಪ್ರತಿಭಟನಕಾರರ ಮನವಿಗೆ ಸ್ಪಂದಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ಹಾಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಪಾಲ್ಗೊಂಡು ಸಮಸ್ಯೆ ಇತ್ಯರ್ಥವಾಗುವವರೆಗೆ ಬುಡಕಟ್ಟು ಜನಾಂಗದ ಹೋರಾಟಕ್ಕೆ ಬೆಂಬಲ ನೀಡುವದಾಗಿ ಘೋಷಿಸಿದರು.

ಈ ಸಂದರ್ಭ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅರುವತ್ತೋಕ್ಲು ಗ್ರಾ.ಪಂ ಅಧ್ಯಕ್ಷ ತೀತಮಾಡ ಸುಗುಣ ಸೋಮಯ್ಯ, ಕುಂದ ಗ್ರಾಮದಲ್ಲಿ ನೀಡಲಾಗಿರುವ ನಿವೇಶನಕ್ಕೆ ಗುರುತು ಕಲ್ಲು ಹಾಕಲು ಆಗಮಿಸುವಂತೆ ಪ್ರತಿಭಟನಕಾರರಿಗೆ ಹೇಳಿದರು. ಇದಕ್ಕೆ ಸ್ಪಂದಿಸದ ಪ್ರತಿಭಟನಕಾರರು ಅಧಿಕಾರಿಗಳು ಮಂಜೂರಾಗಿರುವ ಸ್ಥಳವನ್ನು ಅರ್ಜಿದಾರರ ಹೆಸರಿಗೆ ವರ್ಗಾವಣೆ ಮಾಡಿ ಮೂಲ ಸೌಕರ್ಯ ನೀಡಿದ ನಂತರವೇ ಬರುವದಾಗಿ ತಿಳಿಸಿದರು.

ಇಓ ಕಿರಣ್ ಪಡ್ನೆಕರ್ ಅವರು ಮೂಲ ಸೌಕರ್ಯವಿಲ್ಲದೆ ಪ್ರತಿಭಟನೆ ಯ ಹಾದಿಯನ್ನು ಹಿಡಿದಿರುವ ಪರಿಶಿಷ್ಟ ಪಂಗಡದ ನಿರಾಶ್ರಿತರ ಮನವಿಯನ್ನು ಸ್ವೀಕಾರ ಮಾಡದೆ ಏರು ಧ್ವನಿಯಲ್ಲಿ ನಿಮ್ಮ ಸಮಸ್ಯೆ ನಮಗೆ ಗೊತ್ತಿದೆ. ಇಲ್ಲಿ ಪ್ರತಿಭಟನೆ ಮಾಡುವ ಅಗತ್ಯವಿಲ್ಲ. ನಿಮಗೆ ನಿಗದಿ ಪಡಿಸಿದ ಸ್ಥಳದಲ್ಲಿ ಗುರುತು ಕಲ್ಲು ಹಾಕುವ ಕೆಲಸವನ್ನು ಹೋಗಿ ಮಾಡಿ ಎಂದು ಆಕ್ಷೇಪಾರ್ಹವಾಗಿ ಮಾತನಾಡಿದಾಗ ಪ್ರತಿಭಟನಕಾರರು ಹಾಗೂ ಇಓ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಕಿರಣ್ ಪಡ್ನೆಕರ್ ಹಠತ್ತಾಗಿ ಯಾವದೇ ಭರವಸೆಯನ್ನು ನೀಡದೆ ಸ್ಥಳದಿಂದ ನಿರ್ಗಮಿಸಿದರು. ಇದರಿಂದ ತಣ್ಣಗಾಗುತ್ತಿದ್ದ ಪ್ರತಿಭಟನೆ ಮತ್ತೇ ಕಾವು ಪಡೆದುಕೊಂಡಿದ್ದು ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದು ಆಹೋರಾತ್ರಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಪ್ರತಿಭಟನೆಯಲ್ಲಿ ಪರಿಶಿಷ್ಟ ಪಂಗಡದ ಪ್ರಮುಖರಾದ ಶೈಲೇಂದ್ರ, ಗಪ್ಪು, ಬೊಳ್ಳಿ, ಮಂಜು, ರಮೇಶ, ಅನಿತಾ, ಚೊಟ್ಟ, ಬೋಜ, ರವಿ, ಮಂಜುಳಾ, ಬೋಜಿ, ಜೆ.ಆರ್. ಅನಿತಾ, ಸೌಮ್ಯ, ಗೀತಾ, ತಂಗಿ, ಸವಿತಾ, ಸುನಿತಾ, ಗೌರಿ, ಸರೋಜ ಹಾಗೂ ನೂರಾರು ಕಾಲೋನಿ ನಿವಾಸಿಗಳು ಪಾಲ್ಗೊಂಡಿದ್ದರು.