ಕರಿಕೆ, ಆ. 22: ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡ್‍ಗಳ ರಸ್ತೆಗಳಿಗೆ ಕೊಡಗು ಪ್ಯಾಕೇಜ್‍ನಡಿಯಲ್ಲಿ ಮಂಜೂರಾದ ರೂ. 46 ಲಕ್ಷ ಮೊತ್ತದ ಕಾಮಗಾರಿಗಳಿಗೆ ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಹಾಗೂ ಕರಿಕೆ ಗ್ರಾ.ಪಂ. ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಪದ್ಮಿನಿ ಪೊನ್ನಪ್ಪ ಈ ಭಾಗ ಹೆಚ್ಚಾಗಿ ಗುಡ್ಡಗಾಡು ಪ್ರದೇಶವಾಗಿದ್ದು, ಪರಿಶಿಷ್ಟ ಜಾತಿ ಪಂಗಡದವರು ವಾಸಿಸುತ್ತಿದ್ದಾರೆ. ಅರಣ್ಯ ಇಲಾಖೆಯಿಂದ ನೀಡುವ ಸೋಲಾರ್ ದೀಪ ಹಾಗೂ ಗ್ಯಾಸ್ ಸಂಪರ್ಕ ಒದಗಿಸಲು ಪ್ರಯತ್ನಿಸುವದಾಗಿ ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಗಳ ಕೊಡಗು ಪ್ಯಾಕೇಜ್‍ನಲ್ಲಿ 3 ಬಾರಿ ತಲಾ 20 ಲಕ್ಷ, 32 ಲಕ್ಷದ ಕಾಮಗಾರಿ ಮುಗಿದಿದ್ದು, ಈ ಬಾರಿ ರೂ. 46 ಲಕ್ಷ ರೂಪಾಯಿ ಹಾಗೂ ಗಡಿ ಪ್ರದೇಶಾಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ರಸ್ತೆಗಳಿಗೆ ರೂ. 17 ಲಕ್ಷ ರೂಪಾಯಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ್ದು, ಮುಂದಿನ ಸಾಲಿನಲ್ಲಿ ರೂ. 50 ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವದಾಗಿ ತಿಳಿಸಿದರು.
ಈ ಸಂದರ್ಭ ರೇಷ್ಮೆ ನಿಗಮದ ಅಧ್ಯಕ್ಷರಾಗಿದ್ದ ಟಿ.ಪಿ. ರಮೇಶ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಪ್ರಮುಖರಾದ ಅರುಣ್ ಮಾಚಯ್ಯ, ಬೇಕಲ್ ರಮಾನಾಥ್, ಬೇಕಲ್ ದೇವರಾಜ, ಹರಿಪ್ರಸಾದ್ ಸೇರಿದಂತೆ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.