ಮಡಿಕೇರಿ, ಆ.22: ಹಾಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳೇ ಮುಂದಿನ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳೆಂದು ಇಂದು ನಡೆದ ಬಿಜೆಪಿ ಮಡಿಕೇರಿ ತಾಲೂಕು ಕಾರ್ಯಕರ್ತರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಹಾಲಿ ಶಾಸಕರ ಹೆಸರುಗಳನ್ನು ಪ್ರಸ್ತಾಪಿಸಿ ಮುಂದಿನ ಚುನಾವಣಾ ಅಭ್ಯರ್ಥಿಗಳು ಎಂದು ಹೇಳಿ ಚಪ್ಪಾಳೆ ಮೂಲಕ ಕಾರ್ಯ ಕರ್ತರು ಒಪ್ಪಿಗೆ ಸೂಚಿಸುವಂತೆ ತಿಳಿಸಿದಾಗ ಕಾರ್ಯಕರ್ತರು ಕರತಾಡನದೊಂದಿಗೆ ಬೆಂಬಲಿಸಿ ನಿರ್ಣಯ ಕೈಗೊಳ್ಳಲಾಯಿತು.
ಶಾಸಕ ಕೆ.ಜಿ. ಬೋಪಯ್ಯ ಸಭೆಯಲ್ಲಿ ಉಪಸ್ಥಿತರಿದ್ದು, ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಆಡಳಿತದಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಸರ್ಕಾರದ ಆಡಳಿತ ಸೃಜನ್ ಪಕ್ಷಪಾತದಿಂದ ಕೂಡಿದ್ದು, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಮುಕ್ತವನ್ನು ಮುಂದುವರೆಸುವಂತೆ ಹೇಳಿದ ಅವರು ಪಕ್ಷದ ಹಿರಿಯರು ತಮಗೆ ಕೊಟ್ಟ ಜವಾಬ್ದಾರಿಯನ್ನು
(ಮೊದಲ ಪುಟದಿಂದ) ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಕರೆ ನೀಡಿದರು.
ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ ಶಾಸಕ ಬೋಪಯ್ಯ ಅವರು ಯಾವದೇ ಗಾಸಿಪ್‍ಗಳಿಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳದಂತೆ ಕಿವಿಮಾತು ಹೇಳಿದರು. ಪಕ್ಷದ ಕಾರ್ಯಕರ್ತರು ದಿನಕ್ಕೆ ಕನಿಷ್ಟ 5 ಮನೆಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲಪಿಸುವ ಕೆಲಸ ಮಾಡಬೇಕು. ಕೇಂದ್ರ ಸರ್ಕಾರ ಯಾವದೇ ತಾರತಮ್ಯ ಮಾಡಿಲ್ಲ. ರಾಜ್ಯ ಸರ್ಕಾರದ ಅನೇಕ ಭಾಗ್ಯಗಳಿಗೆ ಕೇಂದ್ರ ಸರ್ಕಾರ ಶೇ. 75ರಷ್ಟು ಅನುದಾನ ನೀಡಿದೆ.
ಎಸಿಬಿ ಅಧಿಕಾರಿಗಳನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳತ್ತಿದೆ ಎಂದು ಆರೋಪಿಸಿದ ಅವರು ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಪಕ್ಷದವರಿಗೂ ಮನ್ನಣೆ ಸಿಗುತ್ತಿತ್ತು. ಆದರೆ ಈಗಿನ ರಾಜ್ಯ ಸರ್ಕಾರದಿಂದ ಸೃಜನ ಪಕ್ಷಪಾತವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊನೆಯ ದಿನಗಳನ್ನು ಎಣಿಸುತ್ತಿದೆ. ಜಿಲ್ಲೆಯ ಎರಡೂ ಕ್ಷೇತ್ರದ ಬಗ್ಗೆ ಯಾವದೇ ಗೊಂದಲವಿಲ್ಲ. ಹಾಲಿ ಶಾಸಕರುಗಳೇ ಮುಂದಿನ ಅಭ್ಯರ್ಥಿಗಳು.
ಶಾಸಕ ಬೋಪಯ್ಯ ಅವರನ್ನು ಸೋಲಿಸುವ ಷಡ್ಯಂತ್ರ ಕಳೆದ ಬಾರಿಯೂ ನಡೆದಿತ್ತು. ಈ ಬಾರಿಯೂ ಅಂತಹ ಪ್ರಯತ್ನಗಳಾದಲ್ಲಿ ಕಾರ್ಯಕರ್ತರು ಜಾತಿ ರಾಜಕಾರಣಕ್ಕೆ ಬಲಿಯಾಗ ಬಾರದು. ಪ್ರತೀ ಬೂತ್‍ನಲ್ಲಿ ಅಧಿಕ ಮತ ಪಡೆಯುವ ನಿಟ್ಟಿನಲ್ಲಿ ಕೆಲಸ ಅಗತ್ಯವಾಗಿದ್ದು, ಅತ್ಯಧಿಕ ಮತದಿಂದ ಗೆಲ್ಲಿಸುವ ಪ್ರಯತ್ನವಾಗಬೇಕೆಂದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ಕಾರ್ಯಕರ್ತರ ಸಹಕಾರದಿಂದ ಪಕ್ಷ ಬಲಿಷ್ಠವಾಗಿದೆ. ಎರಡೂ ಶಾಸಕರನ್ನು ಮಡಿಕೇರಿ ತಾಲೂಕಿನ ಕಾರ್ಯಕರ್ತರು ಗೆಲ್ಲಿಸಿ ಕೊಡುತ್ತಿದ್ದಾರೆ ಎಂದು ಹೇಳಿದ ಅವರು ಮುಂದಿನ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳು ಕೂಡ ಹಾಲಿ ಶಾಸಕರೇ ಆಗಿದ್ದಾರೆ. ಇದರಲ್ಲಿ ಯಾವದೇ ಗೊಂದಲ ಇಲ್ಲ.
ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಜೋಡಿ ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಭ್ರಷ್ಟ ಸರ್ಕಾರವಿದ್ದರೂ, ಅದನ್ನು ಪ್ರತಿಭಟಿಸುವದನ್ನು ಪಕ್ಷದ ಕಾರ್ಯಕರ್ತರು ಮೈಗೂಡಿಸಿಕೊಂಡಿಲ್ಲ. ದೇಶದಲ್ಲಿಯೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಂ.1 ಭ್ರಷ್ಟ ಸರ್ಕಾರವೆಂದು ಉಲ್ಲೇಖವಾಗಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿ ಕಂಡಿತ್ತು. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ರೂ. 200 ಕೋಟಿ ಅನುದಾನದಲ್ಲಿ ಕೇವಲ ರೂ. 41 ಕೋಟಿ ಮಾತ್ರ ಜಿಲ್ಲೆಗೆ ಬಂದಿದೆ.
ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಹೇಳಿಕೆಗಳು ಪ್ರಕಟಗೊಳ್ಳುತ್ತಿದೆ. ಇಂತಹ ಷಡ್ಯಂತ್ರಗಳಿಗೆ ಕಾರ್ಯಕರ್ತರು ಬಲಿಯಾಗುವದು ಬೇಡ. ಶಾಸಕರುಗಳ ವಿರುದ್ಧ ಇದುವರೆಗೂ ಯಾವದೇ ಆರೋಪಗಳು ಕೇಳಿಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ಬೋಪಯ್ಯ ಹಾಗೂ ರಂಜನ್ ಅವರ ಗೆಲುವಿಗೆ ಕಾರ್ಯ ಕರ್ತರು ಶ್ರಮಿಸಬೇಕು ಎಂದು ಹೇಳಿದರು.ಸಭೆಯ ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ವಹಿಸಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಮರಗೋಡು ಹಾಗೂ ಗಾಳಿಬೀಡು ವ್ಯಾಪ್ತಿಯ ಹಲವಾರು ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಪಾಂಡನ ವಿವೇಕ್, ಇಟ್ಟಣಿಕೆ ಮೋಹನ್, ಪಾಣತ್ತಲೆ ಮಂದಪ್ಪ, ಕನ್ನಿಕಂಡ ಪೆಮ್ಮಯ್ಯ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ನಾಪಂಡ ರವಿ ಕಾಳಪ್ಪ, ಜಿಲ್ಲಾ ಕಾರ್ಯದರ್ಶಿಗಳಾದ ರವಿ ಬಸಪ್ಪ, ಕಾಂಗೀರ ಸತೀಶ್ (ಅಶ್ವಿನ್), ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ, ಕೋಡಿರ ಪ್ರಸನ್ನ, ಸಹಕಾರ ಪ್ರಕೋಷ್ಠದ ನಾಗೇಶ್ ಕುಂದಲ್ಪಾಡಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ ಉಪಸ್ಥಿತರಿದ್ದರು.