ಸೋಮವಾರಪೇಟೆ, ಆ. 24: ಸೋಮವಾರಪೇಟೆಯ ಲೋಕೋಪಯೋಗಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಲಿತ ವರ್ಗದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇಲಾಖೆಯ ವಾಹನ ಚಾಲಕನ ರಕ್ಷಣೆಗೆ ಕೆಲ ರಾಜಕೀಯ ಮುಖಂಡರು ಹಾಗೂ ಸಂಘಸಂಸ್ಥೆಗಳ ಪ್ರಮುಖರು ಮುಂದಾಗಿರುವದು ಖಂಡನೀಯ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಟಿ.ಈ. ಸುರೇಶ್ ಹೇಳಿದರು.

ಇತ್ತೀಚೆಗೆ ದಲಿತ ನೌಕರರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಹಿಳಾ ನೌಕಕರಿಗೆ ಯಾವದೇ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ದಲಿತ ವರ್ಗಕ್ಕೆ ಸೇರಿದ ಮಹಿಳೆಯ ಮೇಲೆ ವಾಹನ ಚಾಲಕ ಮಂಜುನಾಥ್ ಕಳೆದ ನಾಲ್ಕು ತಿಂಗಳಿನಿಂದ ಮಾನಸಿಕ, ಲೈಂಗಿಕ ಕಿರುಕುಳ ನೀಡುತ್ತಾ ಬಂದಿದ್ದಾನೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತೆರಳಿದ ಸಂದರ್ಭ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಪ್ರಮುಖರು ರಾಜಿ ತೀರ್ಮಾನದ ಮೂಲಕ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.

ಆದರೆ, ಸೋಮವಾರಪೇಟೆಯ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು ದಲಿತ ಮಹಿಳೆಗೆ ತಕ್ಷಣದ ನ್ಯಾಯ ಒದಗಿಸಿರುವದು ಶ್ಲಾಘನೀಯ ಎಂದರು.

ದಕ್ಷಿಣ ಭಾರತ ಮಾನವ ಹಕ್ಕು ಶಿಕ್ಷಣ ಮತ್ತು ಸಂರಕ್ಷಣಾ ಘಟಕದ ಜಿಲ್ಲಾ ಸಂಯೋಜಕಿ ಶೈಲಾ ವಸಂತ್ ಮಾತನಾಡಿ, ದಲಿತ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರಶ್ನೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಮಹಿಳೆಯರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ ಎಂದರು.

ಯಾವದೇ ಬಾಧಿತ ಮಹಿಳೆ ತಮಗೆ ಅನ್ಯಾಯವಾಗಿದ್ದರೆ ಮಾನವಹಕ್ಕು ಶಿಕ್ಷಣ ಮತ್ತು ಸಂರಕ್ಷಣಾ ಘಟಕಕ್ಕೆ ಮಾಹಿತಿ (ಮೊಬೈಲ್ ಸಂಖ್ಯೆ 9901512408) ಯನ್ನು ನೀಡಬೇಕು ಎಂದರು.

ಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಪದಾಧಿಕಾರಿಗಳಾದ ಎಂ.ಪಿ. ಹೊನ್ನಪ್ಪ, ಪ್ರತಾಪ್, ಎಚ್.ಕೆ. ಮಹೇಶ್, ಜನಾರ್ಧನ್ ಮತ್ತು ವಿಜಯಕುಮಾರ್ ಉಪಸ್ಥಿತರಿದ್ದರು.