ಶ್ರೀಮಂಗಲ, ಆ. 24: ಕೊಡಗು ಜಿಲ್ಲೆಯ ಮೂಲಕ 2 ರೈಲು ಮಾರ್ಗ ಹಾಗೂ ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ವಿರೋಧಿಸಿ ತಾ. 26 ಕ್ಕೆ ಕುಟ್ಟದಲ್ಲಿ ‘ಕೊಡಗು ಉಳಿಸಿ ಹಾಗೂ ಕಾವೇರಿ ನದಿ ರಕ್ಷಿಸಿ’ ಆಂದೋಲನ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಕುಟ್ಟ ಕೊಡವ ಸಮಾಜದ ಅಧ್ಯಕ್ಷರೂ ಹಾಗೂ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಂಬಲ ನೀಡದಂತೆ ನಿರ್ಣಯ ಕೈಗೊಳ್ಳಲಾಯಿತು. ಇದಲ್ಲದೆ, ರೈಲ್ವೆ ಮಾರ್ಗ - ರಾಷ್ಟ್ರೀಯ ಹೆದ್ದಾರಿ ಯೋಜನೆ ವಿರುದ್ಧ ನಡೆಯುವ ಪ್ರತಿಭಟನೆ ವೇಳೆ ಕುಟ್ಟಕ್ಕೆ ಆಗಮಿಸುವಾಗ ಅದಕ್ಕೆ ಪ್ರತಿರೋಧ ಮಾಡಲಾಗುವದು ಎಂದು ವಿಷ್ಣು ಕಾರ್ಯಪ್ಪ ಸಭೆಯ ಪರವಾಗಿ ತಿಳಿಸಿದರು.
ಕುಟ್ಟ ಕೊಡವ ಸಮಾಜದಲ್ಲಿ ತಾ. 23 ರಂದು ನಡೆದ ಸಭೆಯಲ್ಲಿ ಕೊಡಗಿನಲ್ಲಿ ಸೂಕ್ಷ್ಮ ಪರಿಸರ ತಾಣ ಯೋಜನೆಯನ್ನು ಒಂದು ಕಿ.ಮೀ. ನಿಂದ ಶೂನ್ಯ ಕಿ.ಮೀ.ಗೆ ನಿಗದಿಪಡಿಸಲು, ‘ಕೊಡಗು ಉಳಿಸಿ ಹಾಗೂ ಕಾವೇರಿ ನದಿ ರಕ್ಷಿಸಿ’ ಆಂದೋಲನ ಸಮಿತಿ ಬೆಂಬಲ ನೀಡುವದಾದರೆ ಪ್ರತಿಭಟನೆಗೆ ಷರತ್ತು ಬದ್ಧ ಬೆಂಬಲ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಪ್ರತಿಭಟನೆ ಹಮ್ಮಿಕೊಂಡಿರುವ ಸಂಘಟಕರು ಈ ಬಗ್ಗೆ ತಮ್ಮೊಂದಿಗೆ ಇದುವರೆಗೆ ಸಂಪರ್ಕಿಸದೇ ಇರುವ ಕಾರಣ ಈ ಪ್ರತಿಭಟನೆಗೆ ಬೆಂಬಲ ನೀಡದೆ ಇರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಕುಟ್ಟ ಕೊಡವ ಸಮಾಜದಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ವಿಷ್ಣು ಕಾರ್ಯಪ್ಪನವರು ಕೊಡಗಿನಲ್ಲಿ ಯಾವದೇ ಅಭಿವೃದ್ಧಿ ಮಾಡದಂತೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಈ ಹಿಂದೆ ಹೈಟೆನ್ಷÀನ್ ವಿದ್ಯುತ್ ಮಾರ್ಗಕ್ಕೂ ವಿರೋಧ ವ್ಯಕ್ತಪಡಿಸಿದ್ದರು ಎಂದು ಪ್ರತಿಭಟನೆ ಹಮ್ಮಿಕೊಂಡಿರುವವರ ಮೇಲೆ ಕಿಡಿಕಾರಿದರು. ಕೊಡಗಿನಲ್ಲಿ ಪರಿಸರವನ್ನು ಉಳಿಸಿಕೊಂಡು ಅಥವಾ ಕಾಡುಗಳನ್ನು ಬೆಳೆಸಿಕೊಂಡರೆ ಅಭಿವೃದ್ಧಿ ಆಗುವದಿಲ್ಲ. ಪರಿಸರ ನಾಶವಾಗುತ್ತದೆ ಎಂದು ಹೆದ್ದಾರಿ - ರೈಲು ಮಾರ್ಗದಿಂದ ಜಿಲ್ಲೆಯ ಜನರು ವಂಚಿತರಾಗಬೇಕೆ? ಎಂದು ಪ್ರಶ್ನಿಸಿದರು. ಪರಿಸರ ನಾಶವಾದರೆ ಮಳೆ ಕಡಿಮೆಯಾಗುತ್ತದೆ ಹಾಗೂ ನದಿಮೂಲಗಳು ಬತ್ತುತ್ತದೆ ಎಂದು ಪರಿಸರವಾದಿಗಳು ವಾದಿಸುತ್ತಿರುವದು ತಪ್ಪು ಎಂದು ಅವರು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ತಾ.ಪಂ ಸದಸ್ಯ ಪಲ್ವೀನ್ ಪೂಣಚ್ಚ, ಗ್ರಾ.ಪಂ ಉಪಾದ್ಯಕ್ಷ ಹೊಟ್ಟೇಂಗಡ ಪ್ರಕಾಶ್ ಉತ್ತಪ್ಪ, ಕುಟ್ಟ ಚೇಂಬರ್ ಆಫ್ ಕಾರ್ಮಸ್ ಅಧ್ಯಕ್ಷ ಮುಕ್ಕಾಟಿರ ನವೀನ್ ಅಯ್ಯಪ್ಪ, ವಿ.ಎಸ್.ಎಸ್.ಎನ್. ಅಧ್ಯಕ್ಷ ಮಚ್ಚಾಮಾಡ ಸುಬ್ರಮಣಿ, ಎ ಪಿ.ಸಿ ಯಂ ಅಧ್ಯಕ್ಷ ಅಜ್ಜಮಾಡ ಲವ ಕುಶಾಲಪ್ಪ, ಬ್ರಹ್ಮಗಿರಿ ಕ್ಲಬ್ ಅಧ್ಯಕ್ಷ ಕೇಚಮಾಡ ವಾಸು ಉತ್ತಪ್ಪ, ಮತ್ತಿತರರು ಹಾಜರಿದ್ದರು. ಸಭೆಯಲ್ಲಿ ಕೆ. ಬಾಡಗ ಗ್ರಾ.ಪಂ. ಉಪಾಧ್ಯಕ್ಷ ಸಿ.ಡಿ. ಬೋಪಣ್ಣ, ಕೊಡವ ಸಮಾಜದ ಉಪಾಧ್ಯಕ್ಷ ಕೊಂಗಂಡ ಸುರೇಶ್ ಮತ್ತಿತರರು ಮಾತನಾಡಿದರು.