ಕುಶಾಲನಗರ, ಆ. 22: ಮೈಸೂರಿನಲ್ಲಿ ನಡೆಯಲಿರುವ ಕಬಡ್ಡಿ ಪ್ರೀಮಿಯರ್ ಲೀಗ್ ಒಡೆಯರ್ ಕಪ್ ಪಂದ್ಯಾವಳಿಯಲ್ಲಿ ಕೊಡಗಿನ ತಂಡ ಪಾಲ್ಗೊಳ್ಳಲಿದೆ ಎಂದು ತಂಡ ಮಾಲೀಕರಾದ ಚಾಮರಾಜನಗರದ ಬಿಜೆಪಿ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 26 ರಿಂದ 29 ರವರೆಗೆ ಮೈಸೂರಿನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿವೆ. ಈ ಪೈಕಿ ಕೊಡಗು ಜಿಲ್ಲೆಯ ಕೆಲ್ಲಂಬಳ್ಳಿ ಲೆಜೆಂಡ್ಸ್ ತಂಡವು ಕೂಡ ಪಾಲ್ಗೊಳ್ಳಲಿದ್ದು ಪ್ರಶಸ್ತಿ ಗೆಲ್ಲುವ ಎಲ್ಲಾ ಅರ್ಹತೆ ಹೊಂದಿದೆ ಎಂದರು.
ನಶಿಸಿ ಹೋಗುತ್ತಿರುವ ದೇಶೀಯ ಕ್ರೀಡೆ ಕಬಡ್ಡಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಕಬಡ್ಡಿ ಆಟಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ. ಕುಶಾಲನಗರದ ಉದ್ಯಮಿ ಅಣ್ಣೇಗೌಡ ಅವರ ಸಹ ಮಾಲೀಕತ್ವದಲ್ಲಿ ಚಾಮರಾಜನಗರ ಹಾಗೂ ಕೊಡಗು ತಂಡಗಳು ಪಾಲ್ಗೊಳ್ಳಲಿವೆ. ರಾಷ್ಟ್ರೀಯ ಹಾಗೂ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಂತೆ ತಂಡಗಳನ್ನು ರಚಿಸಲಾಗಿದ್ದು ರಾಷ್ಟ್ರಮಟ್ಟದ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತಂಡದ ತರಬೇತುದಾರ ರಾಷ್ಟ್ರಮಟ್ಟದ ಕಬಡ್ಡಿ ಪಟು ತುಳಸಿದಾಸ್ ಮಾತನಾಡಿ, ಜಾನಪದ ಕ್ರೀಡೆ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಪಂದ್ಯಾಟದ ಅಂಗವಾಗಿ ಈಗಾಗಲೆ ತರಬೇತಿ ಆರಂಭಗೊಂಡಿದ್ದ 15 ದಿನಗಳ ಕಾಲ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ತಂಡದ ವ್ಯವಸ್ಥಾಪಕರಾದ ಗಿರೀಶ್, ಲೋಕೇಶ್, ಗೋವಿಂದಶೆಟ್ಟಿ, ನಾಯಕ ಎಸ್.ಅರುಣ್, ಅಜೀಜ್ ಇದ್ದರು.