ವೀರಾಜಪೇಟೆ, ಆ. 24: ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ವಿಯಾಗಲು ಮೂಲಭೂತ ಕರ್ತವ್ಯಗಳ ಬಗ್ಗೆ ಹೆಚ್ಚಿನ ಗಮನಹರಿಸುವಂತಾಗಬೇಕು ಎಂದು ವೀರಾಜಪೇಟೆ ಸಿವಿಲ್ ನ್ಯಾಯಾಧೀಶೆÀ ಕೆ. ಶರ್ಮಿಳಾ ಕಾಮತ್ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಹಾಗೂ ಸರ್ಕಾರಿ ಪದವಿ ಕಾಲೇಜು ವೀರಾಜಪೇಟೆ ಇವುಗಳ ಸಂಯುಕ್ತಾಶ್ರಯದಲ್ಲಿ ಪದವಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮೂಲಭೂತ ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರುಹಾಕಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಕಲಿಯಬೇಕಾಗಿರುವದು ಸಾಕಷ್ಟಿರುತ್ತದೆ ಕಲಿಯುವದನ್ನು ಬಿಟ್ಟು ದುಷ್ಚಟಗಳಿಗೆ ಗಮನ ಹರಿಸಬಾರದು. ಕಾನೂನು ಸೇವೆಗಳ ಸಮಿತಿಯಿಂದ ಪ್ರತಿಯೊಬ್ಬರಿಗೂ ಉಚಿತ ಕಾನೂನು ಅರಿವು ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಮಾತನಾಡಿ ಸಂವಿಧಾನದ- ಮೂಲಭೂತ ಹಕ್ಕುಗಳ ಬಗ್ಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಜನರಿಗೆ ತಿಳಿಸಿದ್ದಾರೆ. ಎಲ್ಲ ದೇಶಕ್ಕಿಂತಲೂ ಅತಿದೊಡ್ಡ ಸಂವಿಧಾನವನ್ನು ಭಾರತ ಹೊಂದಿದೆ. ಮೂಲಭೂತ ಕರ್ತವ್ಯಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು.

ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ, ಟಿ.ಕೆ. ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲ ಸಿಂಧೂರ ಎನ್. ಸ್ವಾಮಿ ಉಪನ್ಯಾಸ ನೀಡಿದರು.

ಮಾನವ ಹಕ್ಕುಗಳ ಸಮಿತಿ ಸಂಚಾಲಕ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಎಂ.ಎಂ. ವನಿತ್‍ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿದ್ಯಾರ್ಥಿನಿ ಯಶಸ್ವಿನಿ ನಿರೂಪಿಸಿ, ಶಾಂಭವಿ ವಂದಿಸಿದರು.