ಸೋಮವಾರಪೇಟೆ, ಆ.23: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಅನೇಕ ಸಮಯದಿಂದ ಕೊಳೆತು ನಾರುತ್ತಿದ್ದ ತ್ಯಾಜ್ಯಗಳಿಗೆ ಕೊನೆಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮುಕ್ತಿ ನೀಡಿದ್ದಾರೆ.
ರೋಗಗಳಿಂದ ಮುಕ್ತಿ ನೀಡಬೇಕಾದ ಆಸ್ಪತ್ರೆಯೇ ರೋಗಗಳನ್ನು ಉಂಟುಮಾಡುವ ತಾಣವಾಗಿ ಪರಿವರ್ತನೆಯಾಗಿದ್ದ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ತಕ್ಷಣ ಸಾಮಾಜಿಕ ಕಳಕಳಿಯೊಂದಿಗೆ ಸ್ಪಂದಿಸಿದ ರಕ್ಷಣಾ ವೇದಿಕೆಯ ಕಾರ್ಯಕರ್ತರ ಕೆಲಸಕ್ಕೆ ಸಾರ್ವಜನಿಕ ವಲಯದಿಂದಲೂ ಶ್ಲಾಘನೆ ವ್ಯಕ್ತವಾಗಿದೆ.ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿರುವದರಿಂದ ಆಸ್ಪತ್ರೆ ಸೇರಿದಂತೆ ಇತರ ಕಡೆಗಳಿಂದ ತ್ಯಾಜ್ಯ ಸಂಗ್ರಹಿಸುವದೂ ಸ್ಥಗಿತಗೊಂಡಿತ್ತು. ಸರ್ಕಾರಿ ಆಸ್ಪತ್ರೆಯ ಶುಚಿತ್ವ ಸೇರಿದಂತೆ ಇನ್ನಿತರ ಕೆಲಸಗಳ ಟೆಂಡರ್ ಪಡೆದಿರುವವರೂ ಸಹ ತಮ್ಮ ಕರ್ತವ್ಯ ಪ್ರಜ್ಞೆ ಮರೆತ ಪರಿಣಾಮ ವೈದ್ಯರು ರೋಗಿಗಳನ್ನು ತಪಾಸಣೆ ನಡೆಸುವ ಕೊಠಡಿ ಪಕ್ಕದಲ್ಲಿಯೇ ತ್ಯಾಜ್ಯದ ರಾಶಿ ನಿರ್ಮಾಣವಾಗಿತ್ತು.
ಆಗಾಗ್ಗೆ ಬೀಳುತ್ತಿದ್ದ ಮಳೆಗೆ ತ್ಯಾಜ್ಯಗಳು ಕೊಳೆತು ಆಸ್ಪತ್ರೆಯ ಒಂದು ಭಾಗ ದುರ್ನಾತ ಬೀರುತ್ತಿದ್ದರೆ, ಅಸಂಖ್ಯಾತ ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಸಾಂಕ್ರಾಮಿಕ ರೋಗಗಳನ್ನು ಉತ್ಪಾದಿಸುವ ಕಾರ್ಖಾನೆಯಂತಾಗಿತ್ತು.
ಈ ಬಗ್ಗೆ ತಾ. 23ರ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ತಕ್ಷಣ ಕರ್ನಾಟಕ ರಕ್ಷಣಾ ವೇದಿಕೆಯ ನಗರಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಸೇರಿದಂತೆ 40ಕ್ಕೂ ಅಧಿಕ ಕರವೇ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ, ಕಳೆದ ಅನೇಕ ಸಮಯಗಳಿಂದ ಕೊಳೆತು ನಾರುತ್ತಿದ್ದ ತ್ಯಾಜ್ಯಕ್ಕೆ ಮುಕ್ತಿ ನೀಡಿದರು.
ಸ್ವಯಂ ಪ್ರೇರಣೆಯಿಂದ ಗುದ್ದಲಿ, ಇನ್ನಿತರ ಪರಿಕರ ಹಿಡಿದು ಸಂಗ್ರಹಗೊಂಡಿದ್ದ ಮೂರು ಟ್ರ್ಯಾಕ್ಟರ್ಗಳಷ್ಟು ತ್ಯಾಜ್ಯಗಳನ್ನು ಸಂಗ್ರಹಿಸಿ ಆಸ್ಪತ್ರೆಯ ಹಿಂಭಾಗದಲ್ಲಿಯೇ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆದು ಕಸವನ್ನು ಮುಚ್ಚಿದರು. ಪಟ್ಟಣ ಪಂಚಾಯಿತಿಯಿಂದ ಒಂದು ಟ್ರ್ಯಾಕ್ಟರ್ ಹಾಗೂ ಸ್ವತಃ ರಕ್ಷಣಾ ವೇದಿಕೆಯ ಕಾರ್ಯಕರ್ತರೇ ಮತ್ತೊಂದು ಟ್ರ್ಯಾಕ್ಟರ್ ತಂದು ತ್ಯಾಜ್ಯವನ್ನು ಸಂಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ದೀಪಕ್, ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಸದ ಶೇಖರಣೆಯಿಂದ ರೋಗಿಗಳು, ಸಾರ್ವಜನಿಕರೂ ಸೇರಿದಂತೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಸಂಬಂಧಿ ಸಿದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಸ್ಪಂದನೆಯಿರ ಲಿಲ್ಲ. ಈ ಹಿನ್ನೆಲೆ ಪ್ರತಿಭಟನೆಯ ಭಾಗವಾಗಿ ಇಂದು ವೇದಿಕೆಯ ಕಾರ್ಯಕರ್ತರೇ ಸೇರಿಕೊಂಡು ಸ್ವಚ್ಛತಾ ಆಂದೋಲನದ ಮೂಲಕ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ ಎಂದರು.
ರಕ್ಷಣಾ ವೇದಿಕೆಯ ನಗರಾಧ್ಯಕ್ಷ ಮಂಜುನಾಥ್ ಮಾತನಾಡಿ, ಆಸ್ಪತ್ರೆಯಲ್ಲಿ ಕಸ ಕೊಳೆತು ನಾರುತ್ತಿದ್ದರೂ ಆಸ್ಪತ್ರೆಯ ಶುಚಿತ್ವದ ಗುತ್ತಿಗೆ ಪಡೆದಿರುವವರು ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರಲ್ಲದೇ, ಮುಂದಿನ ದಿನಗಳಲ್ಲಿ ಮತ್ತೆ ಕಸ ಸುರಿದರೆ ಸಂಬಂಧಿಸಿದವರ ವಿರುದ್ಧ ಕಾನೂನು ರೀತಿಯ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು. ಈ ಸಂಬಂಧಿತ ಮನವಿಯನ್ನು ಕಾರ್ಯಕರ್ತರು ಆಸ್ಪತ್ರೆಯ ವೈದ್ಯ ಜಶ್ವಂತ್ ಅವರ ಮುಖಾಂತರ ಆಡಳಿತಾಧಿಕಾರಿಗೆ ಸಲ್ಲಿಸಿದರು.
ರಕ್ಷಣಾ ವೇದಿಕೆಯ ನಗರ ಕಾರ್ಯದರ್ಶಿ ಕೆ.ಪಿ. ರವೀಶ್, ಪದಾಧಿಕಾರಿಗಳಾದ ಅಬ್ಬಾಸ್, ಬೇಟು, ದೇವೇಂದ್ರ, ಇಬ್ರಾಹಿಂ, ಸಂತೋಷ್, ನಾಗೇಶ್, ಸುಜಯ್, ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ಲತಾ, ಎಂ.ಎ. ರುಬೀನಾ, ನೇತ್ರಾ ಸೇರಿದಂತೆ ಇತರರು ತ್ಯಾಜ್ಯವಿಲೇ ವಾರಿಯಲ್ಲಿ ಭಾಗವಹಿಸಿದ್ದರು.
ಕೇವಲ ಹೋರಾಟ, ಪ್ರತಿಭಟನೆಗಳ ಎಚ್ಚರಿಕೆ, ಪತ್ರಿಕಾ ಪ್ರಕಟಣೆ, ಮನೋರಂಜನಾ ಕಾರ್ಯಕ್ರಮ ಗಳಿಗಷ್ಟೇ ಸೀಮಿತವಾಗದೇ ಸಾಮಾಜಿಕ ಕಳಕಳಿಯೊಂದಿಗೆ ಸ್ವತಃ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡ ಸಂಘಟನೆಯ ಕಾರ್ಯಕರ್ತರ ಕೆಲಸಕ್ಕೆ ಸಾರ್ವಜನಿಕರೂ ಶ್ಲಾಘನೆ ವ್ಯಕ್ತಪಡಿಸಿದರು. - ವಿಜಯ್ ಹಾನಗಲ್