ಮಡಿಕೇರಿ, ಆ. 24: ಡಿವೈಎಸ್‍ಪಿ ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆಗ್ರಹಿಸಿರುವ ಕೊಡಗು ಜಿಲ್ಲಾ ಬಿಜೆಪಿ ಸಿಬಿಐಗೆ ವಹಿಸದಿದ್ದಲ್ಲಿ ಕೊಡಗು ಬಂದ್ ಮಾಡುವದಾಗಿ ಎಚ್ಚರಿಕೆ ನೀಡಿದೆ.

ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು ಕರ್ತವ್ಯ ಲೋಪವೆಸಗಿರುವ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡಿರುವ ಹಿನ್ನೆಲೆ ಇಂದು ಬಿಜೆಪಿ ವತಿಯಿಂದ ಜಿ.ಟಿ. ವೃತ್ತದಲ್ಲಿ ಪ್ರತಿಭಟನೆ ನಡೆಯಿತು.ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು, ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರ ಸಚಿವ ಜಾರ್ಜ್ ಅವರ ಪರವಾಗಿ ನಿಂತಿದೆ. ಇದರಿಂದಾಗಿ ದಕ್ಷ ಅಧಿಕಾರಿ ಡಿವೈಎಸ್‍ಪಿ ಗಣಪತಿ ಸಾವಿಗೆ ನ್ಯಾಯ ಸಿಕ್ಕಿಲ್ಲ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿ ಸುವ ಅಧಿಕಾರಿಗಳ ಆತ್ಮಸ್ಥೈರ್ಯ ವನ್ನು ಕುಗ್ಗಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದ್ದು, ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇಲ್ಲವಾದರೆ ಕೊಡಗು ಬಂದ್‍ಗೆ ಕರೆ ನೀಡುವದಾಗಿ ಎಚ್ಚರಿಕೆಯಿತ್ತರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಕಾಂಗ್ರೆಸ್ ಸರಕಾರ ಗಣಪತಿ ಸಾವು ಪ್ರಕರಣದಲ್ಲಿ ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡಿದೆ. ಇದು ಸರಿಯಲ್ಲ. ಕೂಡಲೇ ಡಿವೈಎಸ್‍ಪಿ ಗಣಪತಿ ಅವರು ಸಾವಿಗೂ ಮುನ್ನ ಆರೋಪಿಸಿರುವಂತೆ ಅವರ ಸಾವಿಗೆ ಕಾರಣರಾದ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಬೇಕು. ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ, ದಕ್ಷ ಅಧಿಕಾರಿಗಳಿಗೆ ಕಿರುಕುಳ ನೀಡುವದೇ ರಾಜ್ಯ ಕಾಂಗ್ರೆಸ್ ಸರಕಾರದ ನೀತಿಯಾಗಿದೆ ಎಂದು ಟೀಕಿಸಿದರು. ಡಿವೈಎಸ್‍ಪಿ ಗಣಪತಿ ಸಾವಿಗೆ ಸಂಬಂಧಿಸಿದಂತೆ ಸಮರ್ಪಕ ತನಿಖೆಯಾಗಲೇಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಇಲ್ಲವಾದರೆ ಕೊಡಗು ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದರು.

ಈ ಸಂದರ್ಭ ಬಿಜೆಪಿ ಪದಾಧಿಕಾರಿಗಳಾದ ಕಾಂತಿ, ನಗರಸಭಾ ಸದಸ್ಯರುಗಳಾದ ಕೆ.ಎಸ್. ರಮೇಶ್, ಉಣ್ಣಿಕೃಷ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಮೂಡಾ ಮಾಜೀ ಅಧ್ಯಕ್ಷ ಶಜಿಲ್ ಕೃಷ್ಣನ್, ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ ಮತ್ತಿತರರು ಇದ್ದರು.

ಜಾರ್ಜ್ ರಾಜೀನಾಮೆಗೆ ಒತ್ತಾಯ

ಡಿವೈಎಸ್‍ಪಿ ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳ ನಾಶದ ನೇರ ಹೊಣೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಬೇಕು ಮತ್ತು ಸಚಿವ ಕೆ.ಜೆ. ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ, ಸಾಕ್ಷ್ಯಗಳ ನಾಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದರು.

ತ್ರಿವಳಿ ತಲಾಖ್‍ನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿದರು.

ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ ಸೆ. 4 ರಂದು ಸೋಮವಾರಪೇಟೆಯಲ್ಲಿ ನಡೆಯಲಿದ್ದು, ರಾಜ್ಯದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಗೀತಾ ಪವಿತ್ರ, ಮಡಿಕೆÉೀರಿ ತಾಲೂಕು ಅಧ್ಯಕ್ಷರಾದ ಕವಿತಾ ಬೆಳ್ಯಪ್ಪ, ನಗರಾಧ್ಯಕ್ಷರಾದ ಅನಿತಾ ಪೂವಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಉಪಸ್ಥಿತರಿದ್ದರು.