ಗೋಣಿಕೊಪ್ಪಲು,ಆ.23: ವೀರಾಜಪೇಟೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು ರೂ.2 ಕೋಟಿ ವೆಚ್ಚದಲ್ಲಿ ಒಟ್ಟು 9 ಗ್ರಾಮೀಣ ಗೋದಾಮು ನಿರ್ಮಾಣ ಮುಕ್ತಾಯದ ಹಂತದಲ್ಲಿದ್ದು, ಈಗಾಗಲೇ 7 ಗ್ರಾಮೀಣ ಗೋದಾಮು ಕಾಮಗಾರಿ ಪೂರ್ಣಗೊಂಡಿರುವದಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ತಿಳಿಸಿದ್ದಾರೆ.ಗೋಣಿಕೊಪ್ಪಲು ಎಪಿಎಂಸಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು ತಾ.29 ರಂದು ತಿತಿಮತಿ, ಚಿಕ್ಕಮಂಡೂರು, ಬಿರುನಾಣಿ, ಹಳ್ಳಿಗಟ್ಟು (ಪೆÇನ್ನಂಪೇಟೆ ಸಮೀಪ), ಹಾತೂರು, ದೇವಣಗೇರಿ ಹಾಗೂ ಅಮ್ಮತ್ತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನೇರವೇರಲಿದೆ. ಇನ್ನೆರಡು ಗೋದಾಮು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ಗೋದಾಮುಗಳು ಸುಮಾರು 150 ಮೆಟ್ರಿಕ್ ಟನ್ ಸಾಮಥ್ರ್ಯವನ್ನು ಹೊಂದಿದ್ದು, ರೈತರ ಕೃಷಿ ಉತ್ಪನ್ನಗಳನ್ನು ದಾಸ್ತಾನಿಡಲು ಬಳಸಿಕೊಳ್ಳಬಹುದಾಗಿದೆ. ಭತ್ತದ ಕೊಯ್ಲು ಸಂದರ್ಭ ಬೆಂಬಲ ಬೆಲೆ ನೀಡಲು ಅನುಕೂಲವಾಗುವಂತೆ ರೈತರು ಭತ್ತವನ್ನು ದಾಸ್ತಾನಿಡಲೂ ಗ್ರಾಮೀಣ ಗೋದಾಮನ್ನು ಬಳಸಿಕೊಳ್ಳಬಹುದಾಗಿದೆ. ಎಪಿಎಂಸಿ ವತಿಯಿಂದ ರೈತರು ಗ್ರಾಮೀಣ ಗೋದಾಮಿನಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ದಾಸ್ತಾನಿರಿಸಿ, ಉತ್ತಮ ಬೆಲೆ ಸಿಗುವವರೆಗೂ ಕಾಯುವ ಸಂದರ್ಭ ಉತ್ಪನ್ನದ ದರದ ಮೇಲೆ ಶೇ.80 ರಷ್ಟು ಅಡಮಾನ ಸಾಲವನ್ನು ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ನೀಡಲಿದ್ದು, ಮೂರು ತಿಂಗಳ ದಾಸ್ತಾನಿಗೆ ಯಾವದೇ ಬಡ್ಡಿಯನ್ನು ವಿಧಿಸಲಾಗುವದಿಲ್ಲ ನಂತರ ನಿರ್ದಿಷ್ಟ ಬಡ್ಡಿಯನ್ನು ವಿಧಿಸಲಾಗುತ್ತದೆ ಎಂದು ವಿವರಿಸಿದರು.

ಗೋಣಿಕೊಪ್ಪಲು ಎಪಿಎಂಸಿ 1972 ನೇ ಇಸವಿಯಲ್ಲಿ ಸ್ಥಾಪನೆಯಾಗಿದ್ದು ತಾ.29 ರಂದು ಮಧ್ಯಾಹ್ನ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಹ್ವಾನಿಸಲಾಗುವದು. ಅಂದು ಅಪರಾಹ್ನ 4.30 ಗಂಟೆಗೆ ಅಮ್ಮತ್ತಿಯಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ ಎಂದು ನುಡಿದರು.

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ 2016-17 ಸಾಲಿನಲ್ಲಿ ಒಟ್ಟು ರೂ.1,41,84,471 ಲಕ್ಷ ಸೆಸ್ ಸಂಗ್ರಹಿಸಿದ್ದು, 2017-18 ನೇ ಸಾಲಿನಲ್ಲಿ ಒಟ್ಟು ರೂ.1.56 ಕೋಟಿ ಸೆಸ್ ಸಂಗ್ರಹ ಗುರಿ ನಿಗಧಿಪಡಿಸಲಾಗಿದ್ದು ಈಗಾಗಲೇ ರೂ.62 ಲಕ್ಷ ಸೆಸ್ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಬಾಳೆ, ಅಡಿಕೆ, ಶುಂಠಿ, ಕಾಳುಮೆಣಸು ಇತ್ಯಾದಿ ಕೃಷಿ ಉತ್ಪನ್ನಗಳಿಂದ ಅಧಿಕ ಸೆಸ್ ಸಂಗ್ರಹವಾಗುತ್ತಿದೆ.

ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವಾಗ ಅಪಘಾತ ಸಂಭವಿಸಿ ಅಂಗಊನಗೊಂಡಲ್ಲಿ ರೈತ ಸಂಜೀವಿನಿ ಮೂಲಕ ನಿರ್ಧಿಷ್ಟ ಪರಿಹಾರ ನೀಡಲಾಗುತ್ತದೆ. ರೈತರ ಉಪಯೋಗಕ್ಕೆ ಗೋಣಿಕೊಪ್ಪಲು ಎಪಿಎಂಸಿಯು ಹಾಪ್ ಕಾಮ್ಸ್‍ಗೆ 2 ಮಳಿಗೆ ಹಾಗೂ 1 ಗೋದಾಮು ಸೌಲಭ್ಯ ನೀಡಿದ್ದು ಶೀಘ್ರದಲ್ಲಿಯೇ ರೈತರು ಬೆಳೆದ ಬಾಳೆ, ಕಿತ್ತಳೆ, ಬಟರ್ ಫ್ರೂಟ್, ಸಪೆÇೀಟಾ ಇತ್ಯಾದಿ ಹಣ್ಣು ಹಂಪಲುಗಳನ್ನು ಖರೀದಿಸಲಾಗುವದು ಎಂದರು.

ಇಲ್ಲಿನ ಎಪಿಎಂಸಿ ವ್ಯಾಪ್ತಿಗೆ ಒಳಪಡುವ ವರ್ತಕರು ಕೃಷಿ ಉತ್ಪನ್ನಗಳನ್ನು ಯಾರ್ಡ್‍ಗೆ ತಂದು ಮಾರಾಟ ಮಾಡುವಂತೆಯೂ, ಕಡ್ಡಾಯವಾಗಿ ಲೈಸೆನ್ಸ್ ಹೊಂದುವಂತೆಯೂ ಮನವಿ ಮಾಡಿದ್ದಾರೆ. ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಗರಿಷ್ಟ ರೂ.2 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ., ಹಿರಿಯ ನಾಗರಿಕರಿಗೆ ಪಿಂಚಣಿ ಕಾರ್ಯಕ್ರಮವನ್ನು ತಾ.30 ರಂದು ಏರ್ಪಡಿಸಲಾಗಿದ್ದು ಇದರ ಸದುಪಯೋಗ ಹೊಂದಲು ಕರೆ ನೀಡಿದರು.

ಎಪಿಎಂಸಿ ಯಾರ್ಡ್‍ನ ಮುಖ್ಯ ದ್ವಾರ ಹಾಗೂ ವಿವಿಧ ಸೂಕ್ಷ್ಮ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಕೆ, ಇಲ್ಲಿನ ರಸ್ತೆ ಅಭಿವೃದ್ಧಿಗೆ ರೂ.60 ಲಕ್ಷ ಕ್ರಿಯಾ ಯೋಜನೆ, ವಸತಿ ಗೃಹದ ನವೀಕರಣಕ್ಕೆ ರೂ.15 ಲಕ್ಷ ಯೋಜನೆ, ಪೆರುಂಬಾಡಿ, ಕುಟ್ಟ, ಆನೆಚೌಕೂರು ಹಾಗೂ ಮಾಲ್ದಾರೆ ಚೆಕ್‍ಪೆÇೀಸ್ಟ್ ನವೀಕರಣಕ್ಕೆ ರೂ.8 ಲಕ್ಷದ ಕ್ರಿಯಾಯೋಜನೆ ತಯಾರಿಸಿರುವದಾಗಿ ಹೇಳಿದರು. ತಾ.29 ರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್‍ಸಿಂಹ, ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಎಪಿಎಂಸಿ ಉಪಾಧ್ಯಕ್ಷ ಕೆ.ಪಿ.ಬಾಲಕೃಷ್ಣ, ಕಾರ್ಯದರ್ಶಿ ಓ.ಹಂಪಣ್ಣ, ಸದಸ್ಯರಾದ ಗುಮ್ಮಟಿರ ಕಿಲನ್ ಗಣಪತಿ, ಬೊಳ್ಳಾಜಿರ ಸುಶೀಲ ಅಯ್ಯಪ್ಪ, ಭೀಮಣಿ, ಚಿಯಕ್‍ಪೂವಂಡ ಸುಬ್ರಮಣಿ, ಮಾಚಂಗಡ ಸುಜಾ ಪೂಣಚ್ಚ, ಪ್ರವೀಣ್, ಮೋಹನ್ ರಾಜು,ಆದೇಂಗಡ ವಿನು ಚಂಗಪ್ಪ, ಎಪಿಎಂಸಿ ಸಿಬ್ಬಂದಿ ಜಯಂತಿ ಉಪಸ್ಥಿತರಿದ್ದರು. - ಟಿ.ಎಲ್.ಎಸ್.