ಶ್ರೀಮಂಗಲ, ಆ. 23: ಕೊಡಗು ಜಿಲ್ಲೆಗೆ ಮಾರಕವಾಗಿರುವ ಮತ್ತು ಕೊಡಗು ಜಿಲ್ಲೆಯ ಮುಖಾಂತರ ಹಾದು ಹೊಗಲಿರುವ ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ತಡೆಯುವ ನಿಟ್ಟಿನಲ್ಲಿ ತಾ. 26 ರಂದು ಕುಟ್ಟದಲ್ಲಿ ‘ಕೊಡಗು ಉಳಿಸಿ ಕಾವೇರಿ ನದಿ ರಕ್ಷಿಸಿ’ ಆಂದೋಲದಲ್ಲಿ ಷರತ್ತು ಬದ್ಧವಾಗಿ ಬೆಂಬಲವನ್ನು ವ್ಯಕ್ತಪಡಿಸುವದ್ದಾಗಿ ಕುಟ್ಟ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಕುಟ್ಟ, ನಾಲ್ಕೇರಿ ಹಾಗೂ ಕೆ.ಬಾಡಗ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಯ ಪ್ರಮುಖರು ಪಾಲ್ಗೊಂಡಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಈಗಾಗಲೇ ಜಿಲ್ಲೆಯನ್ನು ಸೂಕ್ಷ್ಮ ಪ್ರದೇಶ ಪಟ್ಟಿಗೆ ಸೇರಿಸಲಾಗಿದೆ. ಆದರೆ ಕೇರಳ ರಾಜ್ಯದಲ್ಲಿ ಶೂನ್ಯ ವ್ಯಾಪ್ತಿಗೆ ತರಲಾಗಿದೆ. ಆದರೆ ಕೊಡಗಿನಲ್ಲಿ ಇದನ್ನು 1 ಕಿ.ಮೀ.ಗೆ ಒಳಪಡಿಸಿದ್ದಾರೆ, ಇದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಬೆಂಬಲವನ್ನು ವ್ಯಕ್ತಪಡಿಸಿದರೆ, ಕುಟ್ಟದಲ್ಲಿ ನಡೆಯುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ತಾ.ಪಂ ಸದಸ್ಯ ಪಲ್ವೀನ್ ಪೂಣಚ್ಚ, ಗ್ರಾ.ಪಂ ಉಪಾದ್ಯಕ್ಷ ಹೊಟ್ಟೆಂಗಡ ಪ್ರಕಾಶ್ ಉತ್ತಪ್ಪ, ಕುಟ್ಟ ಚೆಂಬರ್ ಆಫ್ ಕಾರ್ಮಸ್ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ, ವಿ.ಎಸ್.ಎಸ್. ಎನ್.ನ ಮಚ್ಚಾಮಾಡ ಸುಬ್ರಮಣಿ, ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷ ಅಜ್ಜಮಾಡ ಲವ ಕುಶಾಲಪ್ಪ, ಬ್ರಹ್ಮಗಿರಿ ಕ್ಲಬ್ ಅಧ್ಯಕ್ಷ ಕೇಚಮಾಡ ವಾಸು ಉತ್ತಪ್ಪ ಹಾಜರಿದ್ದರು.

ಸಭೆಯಲ್ಲಿ ಬಾಂದವ್ಯ ಮಹಿಳಾ ಸಂಘ, ಅಟೋ ಚಾಲಕರ ಸಂಘ, ವಾಹನ ಮಾಲೀಕರ ಮತ್ತು ಚಾಲಕರ ಸಂಘÀ, ಚೂರಿಕಾಡು ಮಹಿಳಾ ಸಂಘ, ತಮಿಳು ಸಂಘÀ, ಎಸ್.ಎನ್.ಡಿ.ಪಿ., ಬಿ.ಎಸ್.ಕೆ. ಕ್ಲಬ್ ಮುಂತಾದ ಸಂಘಟನೆಗಳ ಸದಸ್ಯರು ಹಾಜರಿದ್ದರು.

ಪ್ರತಿಭಟನೆಗೆ ಬೆಂಬಲ

ಶ್ರೀಮಂಗಲ: ಕೊಡಗು ಜಿಲ್ಲೆಯ ಮೂಲಕ ಉದ್ದೇಶಿತ 4 ರಾಷ್ಟ್ರೀಯ ಹೆದ್ದಾರಿ ಹಾಗೂ 2 ರೈಲು ಮಾರ್ಗ ಮಾಡುವದನ್ನು ವಿರೋಧಿಸಿ ಕೊಡಗು ಉಳಿಸಿ ಹಾಗೂ ಕಾವೇರಿ ನದಿ ಉಳಿಸಿ ಆಂದೋಲನ ಸಮಿತಿ ತಾ. 26 ರಂದು ಅಂತರಾಜ್ಯ ಗಡಿ ಕುಟ್ಟದಲ್ಲಿ ಹಮ್ಮಿ ಕೊಂಡಿರುವ ಪ್ರತಿಭಟನೆಗೆ ಮಾಜಿ ಸಚಿವ, ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೊಡಗಿಗೆ ಅಗತ್ಯವಿಲ್ಲದ ಈ ಮಾರಕ ಯೋಜನೆಯನ್ನು ವಿರೋಧಿಸುವದು ಅರ್ಥಪೂರ್ಣ ವಾಗಿದೆ. ಈ ಬಗ್ಗೆ ಸದ್ಯದಲ್ಲಿಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ಆಂದೋಲನ ಸಮಿತಿಯ ನಿಯೋಗದೊಂದಿಗೆ ಭೇಟಿ ಮಾಡಿ ಈ ಯೋಜನೆಗೆ ಅವಕಾಶ ನೀಡದಂತೆ ಮನವರಿಕೆ ಮಾಡುವ ಭರವಸೆ ನೀಡಿದ್ದಾರೆ.

ಮೈಸೂರು ಕೊಡವ ಸಮಾಜ ಮುಖಂಡರ : ಬೆಂಬಲ

‘ಕೊಡಗು ಉಳಿಸಿ ಕಾವೇರಿ ನದಿ ರಕ್ಷಿಸಿ’ ಆಂದೊಲನಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಕುಟ್ಟ- ಶ್ರೀಮಂಗಲ ಕ್ಷೇತ್ರ ಜಿ.ಪಂ. ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಹಾಗೂ ಮಾಜಿ ಎಂ.ಎಲ್.ಸಿ ಚೆಪ್ಪುಡಿರ ಅರುಣ್ ಮಾಚಯ್ಯ, ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಉಪಾದ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಮಾಚಿಮಾಡ ರವಿಂದ್ರ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಮೂವೇರ ಕುಟ್ಟಪ್ಪ ಹಾಗೂ ಮೈಸೂರುವಿನ ವಿವಿಧ ಕೊಡವ ಸಂಘ ಸಂಸ್ಥೆಗಳು, ವೀರಾಜಪೇಟೆ ತಾಲೂಕು ಬೆಳೆಗಾರ ಒಕ್ಕೂಟದ ಮಾಜಿ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಅಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೊಡಗಿಗೆ ಮಾರಕವಾದ ಈ ಯೋಜನೆ ವಿರೋಧಿಸುವದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.