ಮಡಿಕೇರಿ, ಆ. 22: ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆ ಓದುವದು ಹಾಗೂ ದೃಶ್ಯಮಾಧ್ಯಮದಲ್ಲಿ ಬರುವ ಸುದ್ದಿ ವೀಕ್ಷಿಸುವದನ್ನು ರೂಢಿಸಿ ಕೊಳ್ಳಬೇಕೆಂದು ವಿಜಯಕರ್ನಾಟಕ ಪ್ರಧಾನ ವರದಿಗಾರ ಐತಿಚಂಡ ರಮೇಶ್ ಉತ್ತಪ್ಪ ಕರೆ ನೀಡಿದರು.

ಕೊಡಗು ಪ್ರೆಸ್ ಕ್ಲಬ್ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಎಫ್‍ಎಂಸಿ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ಸರಣಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಬರಹ ಕೌಶಲ್ಯ ವಿಷಯಕ್ಕೆ ಸಂಬಂಧಿಸಿದಂತೆ ಕುರಿತು ಪ್ರಾತ್ಯಕ್ಷಿಕೆ ಸಹಿತ ಉಪನ್ಯಾಸ ನೀಡಿದರು.

ಸಮಾಜದಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನಗಳನ್ನು ಅರಿತುಕೊಳ್ಳುವದರ ಮೂಲಕ ಜ್ಞಾನಾರ್ಜನೆಗಾಗಿ ಪ್ರತಿನಿತ್ಯ ವಿವಿಧ ಮೂಲಗಳಿಂದ ಸುದ್ದಿ ಅರಿತುಕೊಳ್ಳಬೇಕು. ಪತ್ರಿಕೆ ಓದುವದು, ಟಿವಿಯಲ್ಲಿ ಪ್ರಸಾರವಾಗುವ ಸುದ್ದಿ ವೀಕ್ಷಿಸುವದು, ಸಾಮಾಜಿಕ ಜಾಲತಾಣಗಳಲ್ಲಿನ ವಿವಿಧ ವೆಬ್‍ಸೈಟ್‍ನಲ್ಲಿರುವ ಮಾಹಿತಿಯನ್ನು ಗಮನಿಸುವದರ ಮೂಲಕ ಅಪ್‍ಡೇಟ್ ಆಗಬೇಕೆಂದರು. ಮುದ್ರಣ, ದೃಶ್ಯ, ಆಕಾಶವಾಣಿ, ಡಾಟ್‍ಕಾಮ್, ವೆಬ್‍ಸೈಟ್‍ನಲ್ಲಿ ಕಾರ್ಯನಿರ್ವಹಿಸಲು ಬಯಸುವವರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪತ್ರಿಕೆ ಓದದಿರುವದಕ್ಕೆ ಮತ್ತು ಟಿವಿಯಲ್ಲಿ ಪ್ರಸಾರವಾಗುವ ಸುದ್ದಿ ಗಮನಿಸದಿ ರುವದಕ್ಕೆ ನೆಪ ಹೇಳಬಾರದು. ವಿವಿಧ ಮೂಲಗಳಿಂದ ಸಿಗುವ ಮಾಹಿತಿ ಪಡೆದು ಕೊಳ್ಳುವದರ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳ ಬಹುದೆಂದರು.

ಬರಹ ಕೌಶಲ್ಯ ಬೆಳೆಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಬೇಕು. ಇಂಗ್ಲೀಷ್, ಕನ್ನಡ ಭಾಷಾ ಜ್ಞಾನ ಬೆಳೆಸಿಕೊಳ್ಳಬೇಕು. ಹೊಸ, ಹೊಸ ಪದ ತಿಳಿದುಕೊಳ್ಳುವ ಪ್ರಯತ್ನದ ಭಾಗವಾಗಿ ಪ್ರತಿನಿತ್ಯ ಐದು ಹೊಸ ಪದ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಸರಿ, ತಪ್ಪಿಗೆ ಸಂಬಂಧಿಸಿದಂತೆ ಸಣ್ಣ ಪುಸ್ತಕದಲ್ಲಿ ನೋಟ್ ಮಾಡಿಟ್ಟು ಕೊಳ್ಳಬೇಕು.

ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಶೇಷ ವರದಿಗಳ ಕಟ್ಟಿಂಗ್ ಇಟ್ಟುಕೊಳ್ಳಬೇಕು. ಒಳ್ಳೆಯ ಬರಹಗಳನ್ನು ಪುಸ್ತಕದಲ್ಲಿ ದಾಖಲಿಸಿಟ್ಟುಕೊಳ್ಳ ಬೇಕೆಂದರು.

ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗ ಉಪನ್ಯಾಸಕ ಇಳೆಯರಾಜ, ಮೋನಿಕಾ ಇದ್ದರು.