ಮಡಿಕೇರಿ, ಆ. 24: ಅತ್ಯಂತ ಹಣ ಚಲಾವಣೆಯಾಗುತ್ತಿರುವ ಸರಕಾರಿ ಕಚೇರಿಯೆಂದರೆ, ಕಂದಾಯ ಇಲಾಖಾ ಕಚೇರಿಯೆಂಬದು ಲೋಕಕ್ಕೆಲ್ಲ ತಿಳಿದ ವಿಚಾರ.., ಆದರೆ ಕಚೇರಿಯಲ್ಲಿ ಒಂದು ‘ಯುಪಿಎಸ್’ ದುರಸ್ತಿಪಡಿಸಲು ಹಣವಿಲ್ಲವಂತೆ. ಅದರಿಂದಾಗಿ ಬೆಳೆಗಾರರಿಗೆ ಪ್ರಮುಖವಾಗಿ ಬೇಕಾಗಿರುವ ಆರ್‍ಟಿಸಿ ದೊರಕದೇ ಪರಿತಪಿಸುವಂತಾಗಿದೆ.ಕಂದಾಯ ಕಚೇರಿಯಲ್ಲಿನ ಆರ್‍ಟಿಸಿ ವಿತರಣಾ ಕೇಂದ್ರದಲ್ಲಿ ಕಳೆದ ಹತ್ತು ದಿನಗಳಿಂದ ಕಾಣುತ್ತಿರುವ ಫಲಕವೆಂದರೆ ತಾಂತ್ರಿಕ ತೊಂದರೆಯಿಂದಾಗಿ ಆರ್‍ಟಿಸಿ ವಿತರಣೆ ಸಾಧ್ಯವಿಲ್ಲವೆಂಬದು. ಈ ದಿನಾಂಕ ಪ್ರತಿದಿನವೂ ಬದಲಾವಣೆಯಾಗುತ್ತಿದೆಯಲ್ಲದೆ, ತಾಂತ್ರಿಕ ತೊಂದರೆ ಮಾತ್ರ ನಿವಾರಣೆಯಾಗುತ್ತಿಲ್ಲ. ಈ ಬಗ್ಗೆ ವಿಚಾರಿಸಿದ ಸಂದರ್ಭ ಪ್ರತಿಕ್ರಿಯಿಸಿದ ಶಿರಸ್ತೆದಾರರು ಮೊನ್ನೆ ಕಂಪ್ಯೂಟರ್ ಹಾಳಾಗಿತ್ತು. ಅದನ್ನು ಸರಿಪಡಿಸಿದ್ದೇವೆ. ಇದೀಗ ಯುಪಿಎಸ್ ಹಾಳಾಗಿದೆ ಅದನ್ನು ದುರಸ್ತಿಪಡಿಸಲು ಹೆಚ್ಚಿಗೆ ಹಣ ಬೇಕಾಗಬಹುದೆಂಬ ಕಾರಣದಿಂದ ಅನುದಾನಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುದಾನ ಬಂದ ಕೂಡಲೇ ದುರಸ್ತಿ ಪಡಿಸಲಾಗುವದೆಂದು ಹೇಳಿದರು.

ಆರ್‍ಟಿಸಿಗಾಗಿ ಬಂದಿದ್ದ ಬೆಳೆಗಾರರ ಅಭಿಪ್ರಾಯದಂತೆ ಇದೀಗ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಗ್ರಾ.ಪಂ.ಗಳಲ್ಲಿ ಆರ್‍ಟಿಸಿ ವಿತರಣೆ ಮಾಡುತ್ತಿರುವದರಿಂದ ತಾಲೂಕು ಕಚೇರಿಯಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಒಂದು ಯುಪಿಎಸ್ ದುರಸ್ತಿಪಡಿಸಲು ಇಷ್ಟೊಂದು ದಿನಗಳು ಬೇಕೆ? ಎಂದು ಪ್ರಶ್ನಿಸುತ್ತಿದ್ದಾರೆ. ಆರಂಭದಿಂದಲೂ ಆರ್‍ಟಿಸಿ ವಿತರಣೆ ಕೇಂದ್ರದಲ್ಲಿ ಗೊಂದಲಗಳಿದ್ದು, ನಿವಾರಣೆಯಾಗುವದು ಯಾವಾಗ ಎಂದು ಪ್ರಶ್ನಿಸುವಂತಾಗಿದೆ.