ಮಡಿಕೇರಿ, ಆ. 23: ಸಾರ್ವಜನಿಕವಾಗಿ ಅಥವಾ ಬಲವಂತವಾಗಿ ಹಣ ಸಂಗ್ರಹಿಸದೆ, ಕೇವಲ ಸಮಿತಿ ಸದಸ್ಯರು, ಸ್ನೇಹಿತರು, ಹಿತೈಷಿಗಳು, ದಾನಿಗಳ ನೆರವಿನಿಂದ ಮಾತ್ರ ಪ್ರತಿಷ್ಠಾಪಿಸಲ್ಪಡುವ ಮಡಿಕೇರಿಯ ಕೊಹಿನೂರು ರಸ್ತೆಯ ಹಿಂದೂ ಯುವಶಕ್ತಿಯ ಗಣಪ ಜಿಲ್ಲೆಯಲ್ಲಿ ಶ್ರೀಮಂತ ಗಣಪತಿ ಎಂದು ಹೆಸರು ಮಾಡಿದೆ. ಈ ಶ್ರೀಮಂತ ಗಣಪತಿ ಈ ಬಾರಿ ಇನ್ನಷ್ಟು ಸಿರಿವಂತನಾಗುತ್ತಿದ್ದಾನೆ.ಬೆಳ್ಳಿಯ ಕಿರೀಟ ಕೊಡೆ ಮೋದಕ, ಪಾಳ, ಅಂಕುಶ, ಹಣೆಮಾಲೆ, ಚಿನ್ನದ ಪದಕ, ಬಳೆಗಳು ಸೇರಿದಂತೆ ಅಂದಾಜು ರೂ. 15 ಲಕ್ಷ ಮೌಲ್ಯದ ಆಭರಣಗಳನ್ನು ತೊಡಿಸಿ ಈ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದಕ್ಕೆ ಈ ಬಾರಿ ರೂ. 4ಲಕ್ಷ ಮೌಲ್ಯದ ಮತ್ತೊಂದು ಆಭರಣ ಸೇರ್ಪಡೆಯಾಗುತ್ತಿದೆ. 30ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಕಾರ್ಯ ಇದಾಗಿದ್ದು, ಇದರ ನೆನಪಿನಲ್ಲಿ ಮೂರ್ತಿಗೆ ವಿಶೇಷವಾಗಿ ಬೆಳ್ಳಿಯ ಪ್ರಭಾವಳಿಯನ್ನು ತಯಾರಿಸಲಾಗಿದೆ.

(ಮೊದಲ ಪುಟದಿಂದ) ತಾ. 25 ರಂದು ನಡೆಯುವ ಪ್ರತಿಷ್ಠಾಪನೆಯ ಸಂದರ್ಭ ಗಣಪತಿ ಮೂರ್ತಿ ಹಳೆಯ ಆಭರಣ ಗಳೊಂದಿಗೆ ಲಕ್ಷ ಮೌಲ್ಯದ ಬೆಳ್ಳಿಯ ಪ್ರಭಾವಳಿಯೊಂದಿಗೆ ಗಮನ ಸೆಳೆಯಲಿದೆ. ಇದರೊಂದಿಗೆ ಭಕ್ತಾದಿಯೊಬ್ಬರು ರೂ. 15 ಸಾವಿರ ಮೌಲ್ಯದ ಚಿನ್ನದ ಹಣೆಯ ತ್ರಿಶೂಲವನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ.

ಮತ್ತೊಂದು ವಿಶೇಷತೆ

30ನೇ ವರ್ಷದ ಯಶಸ್ವಿ ಆಚರಣೆಗಾಗಿ ಹಿಂದೂ ಯುವಶಕ್ತಿ ಸಂಘ ಅಗತ್ಯ ತಯಾರಿ ನಡೆಸಿದೆ. ಕೇವಲ ಯುವಕರು ಮಾತ್ರವಲ್ಲ ಮಹಿಳೆಯರೂ ಕುಟುಂಬ ಸಹಿತವಾಗಿ ಈ ಸಂದರ್ಭ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ವಿಶೇಷವಾಗಿ ಕಳೆದ ಭಾನುವಾರದಂದು ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ನಗರದ ಪಂಪಿನ ಕೆರೆ ಬಳಿಯಿರುವ ಕಾಳಿ ಮಠ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮ, ಉತ್ಸವದ ಯಶಸ್ಸಿನ ಬಗ್ಗೆ ಚರ್ಚೆಯೊಂದಿಗೆ ಮಹಿಳೆಯರಿಗೆ, ಮಕ್ಕಳಿಗೆ ಸೇರಿದಂತೆ ನೆರೆದಿದ್ದವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಶೇಷವಾಗಿ ಗಣಪತಿಗೆ ಇರುವ ವಿವಿಧ ಹೆಸರುಗಳನ್ನು ಹೇಳುವ ಸ್ಪರ್ಧೆ ಸೇರಿದಂತೆ ಮನೋರಂಜನಾ ಸ್ಪರ್ಧೆಯನ್ನೂ ನಡೆಸಲಾಯಿತು.

ಸ್ಪರ್ಧೆಯನ್ನು ಮಂಗಳೂರಿನ ವಿದ್ಯಾಮುರಳೀಧರ್ ಅವರು ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ.ಎಂ. ಸುದೀರ್, ಕಾರ್ಯದರ್ಶಿ ಬಿ.ಕೆ. ಜಗದೀಶ್, ಖಜಾಂಚಿ ಪ್ರಸಾದ್, ಉಪಾಧ್ಯಕ್ಷ ರಾಬಿನ್ ಚಂಗಪ್ಪ, ಗೌರವ ಸಲಹೆಗಾರ ಗಣೇಶ್ ಶೆಣೈ, ಗೌರವಾಧ್ಯಕ್ಷರಾದ ಸತೀಶ್ ಪೈ, ಶಿವ ಕುಮಾರ್ ಶೆಟ್ಟಿ, ಬಿ.ಕೆ. ಅರುಣ್ ಉಪಸ್ಥಿತರಿದ್ದರು.

-ಶಶಿ