ಸಿದ್ದಾಪುರ, ಆ. 23: ಗೋ ರಕ್ಷಣೆಯ ಮುಖವಾಡದಲ್ಲಿ ಕೆಲವು ಸಂಘಟನೆಗಳು ಮುಸಲ್ಮಾನರನ್ನು ಹಾಗೂ ದಲಿತರನ್ನು ಗುರಿಯಾಗಿಸಿ ಹಲ್ಲೆ ನಡೆಸಿ ಹತ್ಯೆ ಮಾಡುತ್ತಿರುವದು ಖಂಡನಿಯ ಎಂದು ಎಸ್.ಡಿ.ಪಿ.ಐ ಜಿಲ್ಲಾ ಮುಖಂಡ ಮುಸ್ತಾಫ ಆರೋಪಿಸಿದರು.
ಸಿದ್ದಾಪುರ ಪ್ಲಾಟಿನಂ ಪ್ಲಾಜಾ ಸಭಾಂಗಣದಲ್ಲಿ ಎಸ್.ಡಿ.ಪಿ.ಐ. ವತಿಯಿಂದ ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿ ಸೋಣ ಎಂಬ ಅಭಿಯಾನದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಧಾಳಿಯಿಂದಾಗಿ ಕಳೆದ ಮೂರು ವರ್ಷದಲ್ಲಿ 31 ಮಂದಿ ಮುಸಲ್ಮಾನರ ಹಾಗೂ 8 ಮಂದಿ ದಲಿತರ ಹತ್ಯೆಯಾಗಿದೆ. ಈ ಹಿಂದೆ ದೇಶದಲ್ಲಿ ನಡೆದ ಎಲ್ಲಾ ಗಲಭೆಗಳಿಗಿಂತ ಭಯಾನಕವಾದ ಗುಂಪು ಹತ್ಯೆ ದೇಶದಲ್ಲಿ ನಡೆಯುತ್ತಿದೆ. ಗೋವಿನ ಹೆಸರಿನಲ್ಲಿ ಭಾವನಾತ್ಮಕವಾಗಿ ಹಿಂದೂ ಮತ್ತು ಮುಸಲ್ಮಾನರನ್ನು ವಿಭಜಿಸುವ ರಾಜಕೀಯ ಷಡ್ಯಂತ್ರÀವನ್ನು ಬಿಜೆಪಿ ಮತ್ತು ಸಂಘ ಪರಿವಾರ ರೂಪಿಸುತ್ತಿದೆ ಎಂದು ಟೀಕಿಸಿದರು. ಗುಂಪು ಹಿಂಸಾ ಹತ್ಯೆಯ ವಿರುದ್ಧ ಪ್ರತಿಯೊಬ್ಬರೂ ಪ್ರತಿರೋಧಿಸಬೇಕೆಂದು ಕರೆ ನೀಡಿದರು. ಅಭಿಯಾನದ ಅಂಗವಾಗಿ ತಾ. 25 ರಂದು ಸಿದ್ದಾಪುರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ತಿಳಿಸಿದರು.
ಎಸ್.ಡಿ.ಪಿ.ಐ. ಕಣ್ಣೂರ್ ಜಿಲ್ಲಾದ್ಯಕ್ಷ ಬಶೀರ್ ಪುನ್ನಾಡ್ ಮಾತನಾಡಿ, ನರೇಂದ್ರ ಮೋದಿರವರು ಗುಜರಾತಿನಲ್ಲಿ ದಬ್ಬಾಳಿಕೆ ಮಾಡುವ ಮುಖಾಂತರ ಕೇಂದ್ರ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇವರು ಮಾಧ್ಯಮಗಳನ್ನು ತಮ್ಮ ಕಪಿ ಮುಷ್ಟಿಯಲ್ಲಿಟ್ಟುಕೊಂಡು ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಮೋದಿ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸಿದ ಬಳಿಕ ಪೆಟ್ರೋಲ್, ಡೀಸೆಲ್ ಸೇರಿದಂತೆ ಬಡ ಜನರು ಬಳಸುವ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಎಂದು ಟೀಕಿಸಿದರು.
ಎಸ್.ಡಿ.ಪಿ.ಐ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಮಾತನಾಡಿದರು.
ಪಕ್ಷದ ಸಿದ್ದಾಪುರ ಘಟಕ ಅಧ್ಯಕ್ಷ ಎ.ಪಿ ಶಾಹುಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶೌಕತ್ ಅಲಿ, ಗ್ರಾ.ಪಂ ಸದಸ್ಯರಾದ ಹುಸೈನ್, ಸಂಶೀರ್, ಸಿದ್ದಾಪುರ ಘಟಕದ ಕಾರ್ಯದರ್ಶಿ ಹನೀಫ್ ಮತ್ತಿತರರು ಇದ್ದರು.