ಮಡಿಕೇರಿ, ಆ. 24: ನಗರದ ಜಿ.ಟಿ. ರಸ್ತೆಯಲ್ಲಿರುವ ಧಾರ್ಮಿಕ್ ಯುವ ವೇದಿಕೆ ಈ ಬಾರಿ ದಶಮಾನೋತ್ಸವ ಸಂಭ್ರಮದಲ್ಲಿದ್ದು, ಈ ಸಂದರ್ಭ ಗಣಪತಿ ಉತ್ಸವದೊಂದಿಗೆ ‘ಹಸಿದವರಿಗೆ ಆಹಾರ-ಉಡುಪಿಲ್ಲದವರಿಗೆ ಉಡುಪಿನ ನೆರವು’ ಎಂಬ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಈ ಬಗ್ಗೆ ವೇದಿಕೆಯ ಪದಾಧಿಕಾರಿಗಳಾದ ಎಂ.ವಿ. ನವೀನ್, ದಿನಕರ ಶೆಟ್ಟಿ, ಇವರುಗಳು ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ.

ಸಮಾಜದಲ್ಲಿ ಅನ್ನ ಆಹಾರವಿಲ್ಲದೆ ನರಳುವವರು ಸಾಕಷ್ಟು ಮಂದಿ ಇದ್ದಾರೆ. ಅಂತವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ‘ಫುಡ್‍ಬ್ಯಾಂಕ್’ ಹೆಸರಿನಲ್ಲಿ ಜಿ.ಟಿ ರಸ್ತೆಯ ಸುಜಾತ ಹೊಟೇಲ್ ವ್ಯಾಪ್ತಿಯಲ್ಲಿ ಫ್ರಿಡ್ಜ್ (ಶೀತಲ ಯಂತ್ರ)ವೊಂದನ್ನು ಇಡಲು ನಿರ್ಧರಿಸಿದ್ದೇವೆ. ಹೊಟೇಲ್ ಅಥವಾ ಮನೆ ಮಾಲೀಕರುಗಳು ದಿನನಿತ್ಯ ಉಳಿದ ಆಹಾರ ಪದಾರ್ಥವನ್ನು ಎಸೆಯುವ ಬದಲು ತಂದು ನಮ್ಮ ಫಿಡ್ಜ್‍ನಲ್ಲಿಟ್ಟರೆ ಅಂತಹ ಆಹಾರ, ಅನ್ನವಿಲ್ಲವೆಂದು ಬರುವ ಅದೆಷ್ಟೋ ಮಂದಿಯ ಹಸಿವನ್ನು ನೀಗಿಸಲಿದೆ. ಈ ಫುಡ್‍ಬ್ಯಾಂಕಿನ ಸಂಪೂರ್ಣ ನಿರ್ವಹಣೆಯನ್ನು ಧಾರ್ಮಿಕ್ ಯುವ ವೇದಿಕೆ ಮಾಡಲಿದ್ದು, ಸಾರ್ವಜನಿಕರು ಕೂಡ ನಮ್ಮೊಂದಿಗೆ ಕೈಜೋಡಿಸಬೇಕು.

ಉಡುಪು ನೆರವು

ಹಸಿದವರಿಗೆ ಅನ್ನದೊಂದಿಗೆ ತೊಡಲು ಉಡುಪಿಲ್ಲದವರಿಗೆ ಉಡುಪು ಸಿಗುವಂತಾಗಬೇಕು ಎಂಬ ಕಲ್ಪನೆಯೊಂದಿಗೆ ಸುಜಾತ ಹೊಟೇಲ್ ವ್ಯಾಪ್ತಿಯಲ್ಲಿ ಉಡುಪು ನೀಡಲು ತೀರ್ಮಾನಿಸಿದೆ.

ಪ್ರತಿಯೊಂದು ಮನೆಗಳಲ್ಲಿ ಬಳಸಲ್ಪಟ್ಟು ನಂತರ ಮೂಲೆ ಸೇರಿರುವ ಅದೆಷ್ಟೋ ಬಟ್ಟೆಗಳು ಇರುತ್ತವೆ. ಅಂತಹ ಬಟ್ಟೆಗಳನ್ನು ನಮಗೆ ತಂದೊಪ್ಪಿಸಿದರೆ ಬಟ್ಟೆ ಇಲ್ಲವೆಂದು ಕೊರಗುವ ಮಂದಿಗೆ ಅದನ್ನು ತಲುಪಿಸುವ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ ಎಂದು ಅವರುಗಳು ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9741957992, 9538531949, ಸಂಖ್ಯೆಗಳನ್ನು ಸಂಪರ್ಕಿಸಬಹುದು.

ತಾ. 25 ರಂದು (ಇಂದು) ಗಣಪತಿ ಆರಾಧನೆ, ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಫುಡ್‍ಬ್ಯಾಂಕ್ ಉದ್ಘಾಟನೆಯು ನೆರವೇರಲಿದೆ. ಮಧ್ಯಾಹ್ನ ಅನ್ನದಾನ, ಸಂಜೆ ಉತ್ಸವ ಮೂರ್ತಿಯ ವಿಸರ್ಜನೋತ್ಸವ ನೆರವೇರಲಿದೆ ಎಂದು ಅವರುಗಳು ತಿಳಿಸಿದ್ದಾರೆ.