ಗೋಣಿಕೊಪ್ಪಲು, ಆ. 24: ಇಲ್ಲಿನ ಕಾವೇರಿ ವಿದ್ಯಾಸಂಸ್ಥೆ ಸ್ಥಾಪನೆಗೆ ಕಾರಣಕರ್ತರಾದ ಶಿಕ್ಷಣ ಪ್ರೇಮಿಗಳನ್ನು ನೆನಪಿಸಿಕೊಳ್ಳುವ ನೆನಪು ಕಾರ್ಯಕ್ರಮ ನಡೆಯಿತು.
ಮುಂದಿನ ವರ್ಷ ಆಚರಿಸಲಿರುವ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯನ್ನು ವರ್ಷಪೂರ್ತಿ ಕಾರ್ಯಕ್ರಮದಡಿ ಐದು ದಶಕಗಳ ಹಿಂದೆ ದಕ್ಷಿಣ ಕೊಡಗಿನಲ್ಲಿ ಮೊದಲ ಬಾರಿಗೆ ಕಾವೇರಿ ವಿದ್ಯಾಸಂಸ್ಥೆ ಸ್ಥಾಪೆನೆಗೆ ಮೂಲ ಕಾರಣಕರ್ತರುಗಳಾದ ಚಕ್ಕೇರ ಮುತ್ತಣ್ಣ, ಚೆರಿಯಪಂಡ ಕುಶಾಲಪ್ಪ, ಕೊಳ್ಳಿಮಾಡ ಮಂದಣ್ಣ ಹಾಗೂ ಚೆರಿಯಪಂಡ ಪೂವಪ್ಪ ಅವರ ಭಾವಚಿತ್ರಗಳಿಗೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಗೌರವ ನೀಡಲಾಯಿತು.
ಸಂಸ್ಥಾಪಕರ ಪರಿಚಯವನ್ನು ಚಕ್ಕೇರ ಗಣಪತಿ, ಪ್ರೊ. ಕಮಲಾಕ್ಷಿ ಹಾಗೂ ಡಾ. ಪೂವಮ್ಮ ಅವರುಗಳು ಮಾಡಿದರು. ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರುಗಳು ಹಿರಿಯರನ್ನು ಸ್ಮರಿಸಿದರು.
ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲ ಸಿ.ಎನ್. ನಾಚಪ್ಪ ಮಾತನಾಡಿ, ವಿದ್ಯಾಸಂಸ್ಥೆ ಉದಯಕ್ಕೆ ಶ್ರಮಿಸಿದ ಹಿರಿಯರನ್ನು ಸ್ಮರಿಸುವ ಕಾರ್ಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದವರಿಗೆ ಗೌರವವಾಗಿದೆ. ಸಾವಿರಾರು ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ಪ್ರಯೋಜನ ಪಡೆದು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ ಎಂದರು.
ಕಾವೇರಿ ವಿದ್ಯಾಸಂಸ್ಥೆ ಸ್ಥಾಪನೆಗೆ ಪೂರ್ವದಲ್ಲಿ ಕೊಡಗಿನ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಹೊರಜಿಲ್ಲೆಯ ವಿದ್ಯಾಸಂಸ್ಥೆಗಳನ್ನು ಅವಲಂಬಿಸಿದ್ದರು. ಆರ್ಥಿಕ ತೊಂದರೆಯಿಂದ ಬಹುತೇಕ ಯುವಜನತೆ ಕಲಿಯುವ ಹಂಬಲವಿದ್ದರೂ ಉನ್ನತ ವ್ಯಾಸಂಗದಿಂದ ವಂಚಿತರಾಗಿದ್ದರು. ಸಂಸ್ಥಾಪಕರ ಕಠಿಣ ಶ್ರಮದ ಫಲವಾಗಿ ವಿದ್ಯಾರ್ಜನೆಯೊಂದಿಗೆ ಸ್ಥಳೀಯರಿಗೆ ಉದ್ಯೋಗ ನೀಡಿ ಸಮಾಜದಲ್ಲಿ ಗೌರವ ಸಿಗುವಂತಾಗಿದೆ ಎಂದರು.
ಕಾವೇರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ. ಎ.ಸಿ. ಗಣಪತಿ, ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಉಪಸ್ಥಿತರಿದ್ದರು. ಕಾವೇರಿ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.