ಗೋಣಿಕೊಪ್ಪಲು, ಆ. 24: ತಾ. 26 ರಂದು ರೈಲ್ವೆ ಮಾರ್ಗ ಮತ್ತು ಹೆದ್ದಾರಿ ಯೋಜನೆ ವಿರೋಧಿಸಿ ಕುಟ್ಟದಿಂದ ನಡೆಸಲು ಉದ್ದೇಶಿಸಿರುವ ಜಾಥಾ ನಡೆದರೆ ಜಾಥಾಕ್ಕೆ ತಡೆ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಲಾಗುವದು ಎಂದು ಟಿ. ಶೆಟ್ಟಿಗೇರಿ ಗ್ರಾಮಸ್ಥರ ಪರವಾಗಿ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಮಾಡ ಸುಮಂತ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಪರಿಸರವಾದಿಗಳು ಅವರ ಪ್ರತಿಷ್ಠೆಗಾಗಿ ಯೋಜನೆಯನ್ನು ವಿರೋಧಿಸಿ ಒಂದೆರಡು ಕೊಡವ ಸಮಾಜಗಳ ಸಹಯೋಗದಲ್ಲಿ ಪ್ರತಿಭಟನೆಗೆ ಮುಂದಾಗಿರುವದಕ್ಕೆ ನಮ್ಮ ವಿರೋಧವಿದೆ. ಇಂತಹ ಯೋಜನೆಗಳು ನಡೆಯುವದಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದರೂ ಕೂಡ ಪ್ರತಿಭಟನೆಗೆ ಮುಂದಾಗಿರುವದಕ್ಕೆ ನಮ್ಮ ವಿರೋಧವಿದೆ. ಪರಿಸರವಾದಿಗಳ ರಕ್ಷಣೆಗಾಗಿ ರೈತರ ಹೆಸರಿನಲ್ಲಿ ಪರಿಸರ ರಕ್ಷಣೆಯನ್ನು ಮುಂದಿಟ್ಟುಕೊಂಡು ಸ್ವಾರ್ಥ ಸಾಧನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕೊಡಗಿನ ಎಲ್ಲಾ ವರ್ಗಗಳನ್ನು ಸೇರಿಸಿ ಸಭೆ ನಡೆಸಿ ಪ್ರತಿಭಟನೆ ನಡೆಸಬೇಕೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಕೊಡವ ಸಮಾಜ ಮಾತ್ರವಲ್ಲದೆ ಇಲ್ಲಿನ ಇನ್ನುಳಿದ ಜನಾಂಗಗಳ ಅಭಿಪ್ರಾಯದಂತೆ ಪ್ರತಿಭಟನೆ ನಡೆಸಲಿ. ಪ್ರತಿಭಟನೆ ನಡೆದರೆ ತಡೆ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಲಾಗುವದು ಎಂದರು.
ಕಾಫಿ ಬೆಳೆಗಾರ ಕಟ್ಟೇರ ಈಶ್ವರ ಮಾತನಾಡಿ, ನಮ್ಮ ಪೂರ್ವಿಜರಿಂದ ನಾವುಗಳು ಪರಿಸರ ರಕ್ಷಣೆಯ ಬಗ್ಗೆ ಜಾಗೃತಿಯ ಪಾಠವನ್ನು ಕರಗತ ಮಾಡಿಕೊಂಡಿದ್ದೇವೆ. ಅಭಿವೃದ್ಧಿಯ ದೃಷ್ಟಿಯಿಂದ ಹೆದ್ದಾರಿ ಅಭಿವೃದ್ಧಿಗೆ ವಿರೋಧಿಸುವದು ಬೇಡ. ಮರ ಕಡಿಯದೆ ಹೆದ್ದಾರಿ ನಿರ್ಮಾಣ ಅಸಾಧ್ಯ. ಇಲ್ಲಿ ಅರಣ್ಯ ಹೆಚ್ಚಾಗಿದೆ. ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ ಎಂದರು.
ಹೈಟೆನ್ಷನ್ ಮಾರ್ಗ ವಿರೋಧಿಸಿ ನಡೆದ ಹೋರಾಟದಲ್ಲಿ ನೈಜ ಹೋರಾಟಗಾರರಿಗೆ ಮಾಹಿತಿ ನೀಡದೆ ಪರಿಸರವಾದಿಗಳು ಮಾರ್ಗ ರೂಪಿಸಲು ಅವರೇ ನಿರ್ಧಾರ ತೆಗೆದುಕೊಂಡರು. ಇದೇ ರೀತಿ ಈ ಹೋರಾಟವು ಕೂಡ ಪ್ರಾಮಾಣಿಕ ಜನತೆಗೆ ದ್ರೋಹವಾಗಲಿದೆ ಎಂದರು.
ಗ್ರಾಮದ ಹಿರಿಯ ಬೆಳೆಗಾರ ಅಪ್ಪಚಂಗಡ ಮೋಟಯ್ಯ ಮಾತನಾಡಿ, ಯಾರ ವಿಶ್ವಾಸ ಪಡೆಯದೇ ಏಕಾಏಕಿ ಪ್ರತಿಭಟನೆ ನಿರ್ಧಾರ ಸರಿಯಲ್ಲ. ಸಾರ್ವಜನಿಕವಾಗಿ ಸಭೆ ನಡೆಸಿ ನಿರ್ಧಾರಕ್ಕೆ ಬರಬೇಕು ಎಂದರು.
ಗೋಷ್ಠಿಯಲ್ಲಿ ಗ್ರಾಮಸ್ಥರುಗಳಾದ ಕುಂಞಂಗಡ ವಿಲ್ಲು ಬೋಪಯ್ಯ, ಚೆಟ್ಟಂಗಡ ಸುರೇಂದ್ರ ಉಪಸ್ಥಿತರಿದ್ದರು.