*ಗೋಣಿಕೊಪ್ಪಲು, ಆ. 24: 38ನೇ ವರ್ಷದ ದಸರಾ ಆಚರಣೆಯಲ್ಲಿ ದಶಮಂಟಪಗಳಿಗೆ ಹಣ ನೀಡುವದಾಗಿ ಭರವಸೆ ನೀಡಿದ ಶ್ರೀ ಕಾವೇರಿ ದಸರಾ ಸಮಿತಿ ಮಹಿಳಾ ದಸರಾ ಹಾಗೂ ಕವಿಗೋಷ್ಠಿಗಳಿಗಷ್ಟೆ ಹಣ ನೀಡಿದ್ದು ಏಕೆ ಎಂದು ದಶಮಂಟಪಗಳ ಅಧ್ಯಕ್ಷರು ಪ್ರಶ್ನಿಸಿ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಹಳೆ ಗ್ರಾ.ಪಂ. ಸಭಾಂಗಣದಲ್ಲಿ ನಡೆದ 38ನೇ ವರ್ಷದ ದಸರಾ ಆಚರಣೆ ಲೆಕ್ಕಪತ್ರ ಮಂಡನೆ ಸಭೆಯಲ್ಲಿ ಈ ವಿಚಾರ ತೀವ್ರ ಚರ್ಚೆಗೆ ಕಾರಣವಾಯಿತು.

ದಶಮಂಟಪಗಳಿಗೆ ಪ್ರೋತ್ಸಾಹದಾಯಕ ಧನ ಸಹಾಯ ನೀಡದಿದ್ದರೆ ದಶಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವದಿಲ್ಲ ಎಂದು ಯುವ ದಸರಾ ಸಮಿತಿ ಅಧ್ಯಕ್ಷ ರಾಜೇಶ್ ಹಾಗೂ ಕಾಡ್ಲಯ್ಯಪ್ಪ ದಸರಾ ಸಮಿತಿ ಸಂಚಾಲಕ ಅಮ್ಮತ್ತಿರ ವಿಕ್ರಮ್ ಸಭೆಯಲ್ಲಿ ತಿಳಿಸಿದರು.

ಕಳೆದ ವರ್ಷದ ದಸರಾ ಆಚರಣೆಯ ಸಂದರ್ಭ ದಶಮಂಟಪಗಳಿಗೆ ಹಣ ನೀಡುವದಾಗಿ ಭರವಸೆ ನೀಡಿದ್ದರೂ ಯಾವದೇ ಸಹಾಯಧನ ದೊರೆತಿಲ್ಲ. ಶ್ರೀ ಕಾವೇರಿ ದಸರಾ ಸಮಿತಿಯಿಂದ ಸಹಾಯಧನ ಸಿಗುವ ಭರವಸೆಯಿಂದ ಸಾಲ ಮಾಡಿ ದಶಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿವೆ. ಇಂದಿಗೂ ಸಮಿತಿಗಳಿಗೆ ಸಾಲ ತೀರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿಯ ದಸರಾ ಆಚರಣೆಯಲ್ಲಿ ದಶಮಂಟಪಗಳ ಶೋಭಾಯಾತ್ರೆ ನಡೆಸಬೇಕೆ ಎಂಬ ಗೊಂದಲದಲ್ಲಿದ್ದೇವೆ. ಈ ಬಾರಿಯಾದರೂ ಸರಕಾರದಿಂದ ಅನುದಾನ ಬರಬಹುದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಕಾರ್ಯಾಧ್ಯಕ್ಷ ಕೆ.ಪಿ. ಬೋಪಣ್ಣ, ಕಳೆದ ವರ್ಷ ದಸರಾ ಆಚರಣೆಗೆ ರೂ. 25 ಲಕ್ಷ ಸರಕಾರದಿಂದ ಅನುದಾನ ಬರುವ ಭರವಸೆಯಿತ್ತು. ಆದರೆ ಕೇವಲ ರೂ. 10 ಲಕ್ಷವಷ್ಟೆ ಅನುದಾನ ಬಂದಿದೆ. ರೂ. 25 ಲಕ್ಷಕ್ಕೆ ದಸರಾ ಆಚರಣೆಯ ಬಜೆಟ್ ತಯಾರಿಸಿದರೂ ರೂ. 10 ಲಕ್ಷ ಬಂದುದರಿಂದ ಗೊಂದಲಗಳು ಏರ್ಪಟ್ಟಿದೆ ಎಂದು ತಿಳಿಸಿದರು. ಗೋಣಿಕೊಪ್ಪ ದಸರಾ ಆಚರಣೆಯಲ್ಲಿ ಗೊಂದಲ ಏರ್ಪಡುತ್ತಿರುವದರಿಂದ ದಸರಾಕ್ಕೆ ಒಂದು ಕಪ್ಪು ಚುಕ್ಕಿಯಾಗಿದೆ. ಮೊದಲೇ ಲೆಕ್ಕಪತ್ರ ಮಂಡಿಸದೆ ಇರುವದರಿಂದ ಮುಂದಿನ ವರ್ಷ ದಸರಾ ಆಚರಣೆಗೆ ತೊಡಕಾಗುತ್ತಿದೆ ಎಂದು ಅರವಿಂದ್ ಕುಟ್ಟಪ್ಪ ತಿಳಿಸಿದರು.

20 ದಿವಸ ಇರುವ ಸಂದರ್ಭವೇ ದಸರಾ ಆಚರಣೆಗೆ ಪೂರ್ವ ಸಿದ್ಧತೆ ನಡೆಯುತ್ತಿದೆ. ಹೀಗಾಗಿ ಸರಕಾರದಿಂದ ಹೆಚ್ಚಿನ ಅನುದಾನ ತರಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷದ ದಸರಾ ಆಚರಣೆಯ ಲೆಕ್ಕಪತ್ರ ಮಂಡನೆಯಲ್ಲೂ ವಿಳಂಬವಾಗುತ್ತಿದೆ. 38ನೇ ದಸರಾ ಆಚರಣೆಯ ಸಂದರ್ಭ ಸಾಂಸ್ಕøತಿಕ ಕಾರ್ಯಕ್ರಮಗಳು ನೀಡಿದ ಕಲಾವಿದರುಗಳಿಗೆ ನೀಡಿದಂತಹ ಚೆಕ್ ಬೌನ್ಸ್ ಆಗಿದೆ. ಚೆಕ್ ಬೌನ್ಸ್ ಆದ ಕಲಾವಿದರು ಉಸ್ತುವಾರಿ ಸಚಿವರಲ್ಲಿ ದೂರು ನೀಡಿದ್ದಾರೆ. ಸಚಿವರು ಗೋಣಿಕೊಪ್ಪ ದಸರಾ ಆಚರಣೆಗೆ ಅನುದಾನ ನೀಡುವದು ಬೇಡ ಎಂಬ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳಿಗೂ ಸೂಚಿಸಿದ್ದಾರೆ. ಈ ವಿಚಾರಗಳಿಂದ ದಸರಾ ಆಚರಣೆಗೆ ಹಿನ್ನಡೆಯಾಗುತ್ತಿದೆ. ಇದರ ಪೂರ್ತಿ ಹೊಣೆ ಕಾವೇರಿ ದಸರಾ ಸಮಿತಿಯದ್ದಾಗಿದೆ ಎಂದು ದಸರಾ ಸಮಿತಿ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಶ್ರಿ ಕಾವೇರಿ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಪ್ಪು ಸುಬ್ಬಯ್ಯ, ಉಪಾಧ್ಯಕ್ಷರುಗಳಾದ ರಾಣಿ ನಾರಾಯಣ್, ಬೋಜಮ್ಮ, ರತಿ ಅಚ್ಚಪ್ಪ, ಸದಸ್ಯರುಗಳಾದ ಮಂಜುಳ, ರಾಮಕೃಷ್ಣ, ಮುರುಗ, ಜೆ.ಕೆ. ಸೋಮಣ್ಣ, ಪರಶುರಾಮ್, ಲೊಕೇಶ್, ಧ್ಯಾನ್ ಸುಬ್ಬಯ್ಯ, ಪ್ರಭಾವತಿ, ಜಾಸ್ಮೀನ್, ಮಮಿತಾ ಮನೋಜ್, ಶಾಹೀನ್, ಧನಲಕ್ಷ್ಮಿ ಹಾಜರಿದ್ದರು.