ಮಡಿಕೇರಿ, ಆ. 23: ಸುಮಾರು ಎರಡು ದಶಕಗಳಿಂದ ಕೇರಳ ಮೂಲದ ವ್ಯಕ್ತಿಗಳಿಗೆ ವಿವಾಹದ ಆಮಿಷವೊಡ್ಡಿ ಭಾರೀ ಮೊತ್ತದ ನಗದು ಹಣದ ಪಡೆದು ವಂಚಿಸುತ್ತಿದ್ದ ಪ್ರಕರಣ ಸಂಬಂಧ ಕೇರಳ ಪೊಲೀಸರು ಮಡಿಕೇರಿಯ ಅಬ್ದುಲ್ ರೆಹಮಾನ್ ಹಾಗೂ ಇತರ ಮೂವರನ್ನು ಇದೀಗ ಮತ್ತೆ ಬಂಧಿಸಿದ್ದಾರೆ.ದಶಕಗಳ ಹಿಂದೆ ನಗರದಲ್ಲಿ ಆಟೋ ಚಾಲಕನಾಗಿದ್ದು, ಬಳಿಕ ವ್ಯಾಪಾರೋದ್ಯಮ ನಡೆಸುತ್ತಿರುವ ಅಬ್ದುಲ್ ರೆಹಮಾನ್ ಹಾಗೂ ಫಾತಿಮಾ ಮಂಜಿಲ್, ಮಂಜೋರಿಪಟ್ಟರ್ ಕುಲಂ ಹಾಗೂ ಮಹಮ್ಮದ್ ಯೂಸುಫ್ ಎಂಬವರನ್ನು ಪಾಲಕ್ಕಾಡ್ ನ್‍ಟ್ಟ್‍ಕಾಲ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಮಡಿಕೇರಿ ಸೇರಿದಂತೆ ಹಾಲೇರಿ, ಸುಂಟಿಕೊಪ್ಪ, ಕುಶಾಲನಗರ ವ್ಯಾಪ್ತಿಯಲ್ಲಿ ಕೇರಳ ಮೂಲದ ವ್ಯಕ್ತಿಗಳನ್ನು ಬರಮಾಡಿಕೊಂಡು ಹೆಣ್ಣಿನ ಆಮಿಷ ಅಥವಾ ಕೇರಳ ಮಂದಿಗೆ ವಿವಾಹ ಮಾಡಿಕೊಡುವದಾಗಿ ಬೇರೆ ಬೇರೆ

(ಮೊದಲ ಪುಟದಿಂದ) ಮಹಿಳೆಯರನ್ನು ತೋರಿಸಿ ವಂಚಿಸಿರುವ ಆರೋಪವನ್ನು ಬಂಧಿತರು ಎದುರಿಸುತ್ತಿದ್ದಾರೆ.

ಅಲ್ಲದೆ, ಇಂಥ ಸಂದರ್ಭಗಳಲ್ಲಿ ಕೇರಳ ಮೂಲದ ಬೇರೆ ಬೇರೆ ವ್ಯಕ್ತಿಗಳಿಂದ ನಗದು, ಚಿನ್ನಾಭರಣ ಇತ್ಯಾದಿ ದೋಚಿದ್ದಲ್ಲದೆ, ಆ ಬಳಿಕ ವಿವಾಹದ ಹೆಸರಿನಲ್ಲಿ ನಕಲಿ ಮದುವೆ ದಂಧೆ ನಡೆಸಿರುವ ದೂರಿನ ಮೇರೆಗೆ ಮೊಕದ್ದಮೆ ಎದುರಿಸುತ್ತಿದ್ದಾರೆ. ನಕಲಿ ಪೊಲೀಸ್ ವೇಷಧರಿಸಿ ನಕಲಿ ವಧುವನ್ನು ತೋರಿಸಿ ಅನೇಕ ದರೋಡೆ ನಡೆಸಿದ್ದಾರೆ.

ಕೊಡಗು ಜಿಲ್ಲಾ ಅಪರಾಧ ಪತ್ತೆದಳದಿಂದ ಈ ಹಿಂದೆ ರೆಹಮಾನ್ ತಂಡದ ಕೃತ್ಯಗಳು ಬಯಲಾಗಿ ಮೊಕದ್ದಮೆ ಎದುರಿಸುವದರೊಂದಿಗೆ ಇಂಥ ವಂಚನೆ ಪ್ರಕರಣಗಳ ಕುರಿತು ನಿಖರ ಮಾಹಿತಿ ಕೊಡಗು ಪೊಲೀಸರಿಗೆ ಲಭ್ಯವಿರುವ ಕಾರಣಕ್ಕಾಗಿ ಆರೋಪಿಗಳು ತಮ್ಮ ದಂಧೆಯನ್ನು ಮೈಸೂರು ಜಿಲ್ಲೆಯತ್ತ ವಿಸ್ತರಿಸಿರುವದು ಬಹಿರಂಗಗೊಂಡಿದೆ.

ಈ ಹಿಂದೆ ಕೊಡಗಿನಲ್ಲಿ ತನ್ನ ಸಂಬಂಧಿ ವಿವಾಹಿತ ಯುವತಿಯರನ್ನು ಬಳಸಿಕೊಂಡು ರೆಹಮಾನ್ ತನ್ನ ತಂಡದೊಂದಿಗೆ ಕೇರಳದ ಅನೇಕ ಅವಿವಾಹಿತ ಯುವಕರನ್ನು ಜಿಲ್ಲೆಗೆ ವಿವಾಹ ಸಂಬಂಧಕ್ಕಾಗಿ ಆಹ್ವಾನಿಸುತ್ತಿದ್ದ. ಅವರನ್ನು ರಹಸ್ಯ ಸ್ಥಳದಲ್ಲಿ ಭೇಟಿ ಮಾಡಿಸಿ ಪೊಲೀಸರ ನಕಲಿ ಉಡುಪು ಧರಿಸಿ ಬೆದರಿಸಿ ಹಣ ಕೀಳುತ್ತಿದ್ದ ಹಲವಾರು ಪ್ರಕರಣ ನಡೆದಿದೆ. ಕೊಡಗು ಅಪರಾಧ ಪತ್ತೆ ದಳದ ಅಧಿಕಾರಿಗಳು ಈ ಸಂಬಂಧ 4 ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಂಡಿದ್ದರು. ಅಲ್ಲದೆ ಒಂದು ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರದ ಆರೋಪಕ್ಕಾಗಿ ಪೋಸ್ಕೋ ಕಾಯ್ದೆಯನ್ವಯ ಕ್ರಮ ಕೈಗೊಂಡಿದ್ದರು.

ಕೊಡಗು ಪೊಲೀಸರ ಭಯದಿಂದ ಆ ಬಳಿಕ ರೆಹಮಾನ್ ತಂಡ ಮೈಸೂರನ್ನು ಕೇಂದ್ರವಾಗಿರಿಸಿಕೊಂಡು ಮತ್ತೆ ಈ ನಕಲಿ ವಿವಾಹ ದಂಧೆ ಆರಂಭಿಸಿದ್ದುದಾಗಿ ತಿಳಿದು ಬಂದಿದೆ.

ಕಳೆದ ವರ್ಷ ಆಗಸ್ಟ್ 14 ಹಾಗೂ ಸೆಪ್ಟೆಂಬರ್ 28ರಂದು ಮಾನಂದವಾಡಿ ಸಮೀಪದ ಎಡತನಟ್ಟುಕಾರ್ ನಿವಾಸಿ ಅಬ್ದುಲ್ ಗಫೂರ್ ಎಂಬವರಿಗೆ ನಕಲಿ ವಿವಾಹದೊಂದಿಗೆ ಹೆಣ್ಣೊಬ್ಬರನ್ನು ತೋರಿಸಿ ರೂ. 4 ಲಕ್ಷ ನಗದು ದೋಚಿರುವದು ಇದೀಗ ಬಹಿರಂಗಗೊಂಡಿದೆ. ಅಲ್ಲದೆ ಮತ್ತೆ ಅಬ್ದುಲ್ ಗಫೂರ್ ಬಳಿ ರೂ. 25 ಲಕ್ಷಕ್ಕೆ ಬೇಡಿಕೆಯಿಟ್ಟು ಬೆದರಿಕೆಯೊಡ್ಡಿರುವ ಕಾರಣ ಫಿರ್ಯಾದಿ ಕೇರಳದ ಪಾಲೆಕ್ಕಾಡ್ ವ್ಯಾಪ್ತಿಯ ನಟ್ಟುಕಲ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಕೆಲವು ಸಮಯದ ಹಿಂದೆ ಈ ದಂಧೆ ಸಂಬಂಧ ಅಲ್ಲಿನ ನಿವಾಸಿಗಳಾದ ಸಾಧಿಕ್ (30) ಅಬೂಬಕರ್ (50) ಹಾಗೂ ಮಾನಂದವಾಡಿಯ ಜಾರ್ಜ್ (50) ಎಂಬ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿಯ ಸುಳಿವು : ಕಳೆದ ಎರಡು ವರ್ಷಗಳಿಂದ ಆರೋಪಿ ರೆಹಮಾನ್ ತಂಡ ಮೈಸೂರು, ಪಿರಿಯಾಪಟ್ಟಣ, ಹುಣಸೂರು ವ್ಯಾಪ್ತಿಯಲ್ಲಿ ದಂಧೆ ನಡೆಸುತ್ತಿದ್ದ ಸುಳಿವಿನೊಂದಿಗೆ ಬಂಧಿತ ಜಾರ್ಜ್ ನೀಡಿದ ನಿಖರ ಮಾಹಿತಿ ಮೇರೆಗೆ ಕುಶಾಲನಗರ ಹೊಟೇಲ್‍ವೊಂದರಲ್ಲಿ ಅಬ್ದುಲ್ ರೆಹಮಾನ್ ಸಹಿತ ಇತರರನ್ನು ಬಂಧಿಸಲಾಗಿದೆ. ಪ್ರಸಕ್ತ ಬಂಧಿತ ಅಬ್ದುಲ್ ರೆಹಮಾನ್ ಹಾಗೂ ತಂಡದ ಆರೋಪಿಗಳನ್ನು ಕೇರಳ ಪೊಲೀಸರು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಗಳ ವಿರುದ್ಧ ಪೊಲೀಸ್ ಕಾಯ್ದೆಯಡಿ 420, 384, 506/1, ಆರ್.ಡಬ್ಲ್ಯು - 149 ಹಾಗೂ 419ರಂತೆ ಪ್ರಕರಣ ದಾಖಲಾಗಿದ್ದು, ನ್‍ಟ್ಟ್‍ಕಾಲ್ ಠಾಣಾಧಿಕಾರಿ ಮೋಹನ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಸಹದ್ ಮತ್ತು ಶಾಫಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಆರೋಪಿ ಅಬ್ದುಲ್ ರೆಹಮಾನ್‍ನನ್ನು ನ್ಯಾಯಾಲಯವು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ್ದು, ಇನ್ನಷ್ಟು ತನಿಖೆ ಮುಂದುವರಿದಿರುವದಾಗಿ ತಿಳಿದು ಬಂದಿದೆ.