ಮಡಿಕೇರಿ, ಆ. 24: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯ 200 ಹಾಗೂ 500 ಮೀಟರ್ ವ್ಯಾಪ್ತಿಯಲ್ಲಿನ ಮದ್ಯದಂಗಡಿ, ಬಾರ್‍ಗಳನ್ನು ಸ್ಥಳಾಂತರಗೊಳಿಸುವಂತೆ ಸುಪ್ರೀಂಕೋರ್ಟ್ ಹೊರಡಿಸಿದ್ದ ಆದೇಶದಂತೆ ಬಾಧೆಗೊಳಗಾಗಿದ್ದ ಮದ್ಯವರ್ತಕರು, ಅವಲಂಬಿತರು ಇದೀಗ ತುಸು ನಿರಾಳರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುಪ್ರೀಂಕೋರ್ಟ್‍ನಿಂದ ಮತ್ತೊಂದು ತೀರ್ಪು ಹೊರಬಿದ್ದಿದ್ದು, ನಗರ ವ್ಯಾಪ್ತಿಯನ್ನು ಈ ಆದೇಶದಿಂದ ಹೊರತಾಗಿಸುವ ನಿರ್ದೇಶನ ಬಂದಿದೆ. ಇದರಂತೆ ಕೊಡಗು ಜಿಲ್ಲೆಯ ಏಕೈಕ ನಗರಸಭೆಯಾಗಿರುವ ಮಡಿಕೇರಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಒತ್ತಿನಲ್ಲಿದ್ದ ಪರಿಣಾಮ ಮುಚ್ಚಲ್ಪಟ್ಟಿದ್ದ 9 ಮದ್ಯದಂಗಡಿ ಬಾರ್‍ಗಳು ಪುನರಾರಂಭಗೊಳ್ಳುವ ಅವಕಾಶ ದೊರೆತಂತಾಗಿದೆ.

ನಗರ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿದ್ದವರಿಗೆ ನವೀಕರಣ ಮಾಡಿಕೊಳ್ಳುವ ಅವಕಾಶ ನ್ಯಾಯಾಲಯದ ಹೊಸ ಆದೇಶದಿಂದ ಲಭ್ಯವಾಗಲಿದೆ. ಈ ಹಿಂದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ಡಿನೋಟಿಫಿಕೇಷನ್ ಮಾಡಿದ್ದರಿಂದ ವೀರಾಜಪೇಟೆ ಹಾಗೂ ಸೋಮವಾರಪೇಟೆ ಪ.ಪಂ. ವ್ಯಾಪ್ತಿಯ ಮದ್ಯ ವರ್ತಕರಿಗೆ ಧಕ್ಕೆಯಾಗಿರಲಿಲ್ಲ.

ಆದರೆ ಕುಶಾಲನಗರ ಪಟ್ಟಣ ಪಂಚಾಯಿತಿಯಾದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವದರಿಂದ ಅಲ್ಲಿನ ವಹಿವಾಟು ಸ್ಥಗಿತಗೊಂಡಿತ್ತು. ಇದರೊಂದಿಗೆ ಮಡಿಕೇರಿ ನಗರದಲ್ಲಿ ಸುದರ್ಶನ ವೃತ್ತದಿಂದ ಜಿ.ಟಿ. ವೃತ್ತದ ತನಕದಲ್ಲಿದ್ದ 9 ಮಳಿಗೆಗಳು ಸುಪ್ರೀಂಕೋರ್ಟ್ ಆದೇಶದಿಂದ ಬಾಧೆಗೊಳಗಾಗಿದ್ದವು. ಇದೀಗ ಹೊಸ ಆದೇಶದಿಂದ ಮಡಿಕೇರಿ ನಗರದ ವರ್ತಕರು ನಿರಾಳರಾಗಲಿದ್ದಾರೆ. ಆದರೆ ಕುಶಾಲನಗರ ಪಟ್ಟಣ ಪಂಚಾಯಿತಿಯಾಗಿರುವದರಿಂದ ಇದು ಇನ್ನೂ ಗೊಂದಲದಲ್ಲಿದೆ.