ಸಿದ್ದಾಪುರ, ಆ. 24: ಕೊಡಗಿನ ಮೂಲಕ ರೈಲು ಮಾರ್ಗ ಹಾಗೂ ಹೆದ್ದಾರಿ ಯೋಜನೆಗೆ ಸಿದ್ದಾಪುರ ಕೊಡವ ಕಲ್ಚರಲ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಸಿದ್ದಾಪುರದ ಕೊಡವ ಕಲ್ಚರಲ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ದೇವಣಿರ ಸುಜಯ್ ಮಾತನಾಡಿ, ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಯ ಮೂಲಕ ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಾರಂಬಿಸುವದ್ದರಿಂದ ಕೊಡಗಿನ ಪರಿಸರಕ್ಕೆ ಧಕ್ಕೆ ಆಗುವ ಸಾಧ್ಯತೆ ಇದೆ. ಕೂಡಲೇ ಈ ಯೋಜನೆಯನ್ನು ಕೈ ಬಿಡಬೇಕು. ಇದಕ್ಕೆ ಕೊಡವ ಕಲ್ಚರಲ್ ಅಸೋಸಿಯೇಷನ್ ವಿರೋಧವಿದೆ ಎಂದರು. ಈಗಾಗಲೇ ಹೈಟೆನ್ಷನ್ ವಿದ್ಯುತ್ ಯೋಜನೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಮರಗಳನ್ನು ಧರೆಗೆ ಉರುಳಿಸಿ ಮರ ದಂಧೆ ಮಾಡಿ ಲೂಟಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ ಎಂದು ಆರೋಪಿಸಿ ದರು. ಪಾಲಚಂಡ ಅಚ್ಚಯ್ಯ ಮಾತನಾಡಿ, ಜಿಲ್ಲೆಗೆ ಮಾರಕವಾಗಿರುವ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಪರಿಸರ ನಾಶವಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಇಳಿಮುಖವಾದ ಹಿನ್ನೆಲೆ ಸರ್ಕಾರವೇ ಬರಗಾಲ ಪ್ರದೇಶವೆಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ವಿರೋಧಿಸಿ ಕೊಡಗು ಉಳಿಸಿ ಕಾವೇರಿ ಉಳಿಸಿ ಆಂದೋಲನಕ್ಕೆ ಹಾಗೂ ಪ್ರತಿಭಟನೆಗೆ ಸಿದ್ದಾಪುರ ಕೊಡವ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡುತ್ತದೆಂದರು. ಗೋಷ್ಠಿಯಲ್ಲಿ ಕೊಡವ ಕಲ್ಚರಲ್ ಅಸೋಸಿಯೇಷನ್‍ನ ಪದಾಧಿಕಾರಿಗಳಾದ ನಡಿಕೇರಿಯಂಡ ಮಾಚಯ್ಯ, ಬಲ್ಲಾರಂಡ ಅಭೀತ್, ಚೇರಂಡ ಸುನಿಲ್, ಪೊನ್ನಚಂಡ ವಿಷ್ಣುಬೆಳ್ಯಪ್ಪ ಹಾಜರಿದ್ದರು.